ಜಮೈಕಾ : ಉಸೇನ್ ಬೋಲ್ಟ್ 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ನಲ್ಲಿ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.128 ವರ್ಷಗಳ ನಂತರ ಕ್ರಿಕೆಟ್ ಆಟವು ಒಲಿಂಪಿಕ್ ಕ್ರೀಡಾಕೂಟಕ್ಕೆ ಮರಳಿದೆ, ಈ ಐತಿಹಾಸಿಕ ಪುನರಾಗಮನದಲ್ಲಿ ಬೋಲ್ಟ್ ಜಮೈಕಾವನ್ನು ಪ್ರತಿನಿಧಿಸಲು ಉತ್ಸುಕರಾಗಿದ್ದಾರೆ.

128 ವರ್ಷಗಳ ನಂತರ ಕ್ರಿಕೆಟ್ ಒಲಿಂಪಿಕ್ಸ್ಗೆ ಮರಳಲಿದ್ದು, 2028 ರ ಜುಲೈ 12 ರಿಂದ 29 ರವರೆಗೆ ಲಾಸ್ ಎಂಜಲೀಸ್ ನಲ್ಲಿ ನಡೆಯಲಿರುವ LA28 ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ ಆರು ತಂಡಗಳು ಪದಕಗಳಿಗಾಗಿ ಸ್ಪರ್ಧಿಸಲಿವೆ.

39 ವರ್ಷದ ಬೋಲ್ಟ್, ಕ್ರಿಕೆಟ್ ಹುಚ್ಚು ಪ್ರದೇಶವಾದ ಕೆರಿಬಿಯನ್ನಲ್ಲಿ ಮತ್ತು ಜಾರ್ಜ್ ಹೆಡ್ಲಿ, ಮೈಕೆಲ್ ಹೋಲ್ಡಿಂಗ್, ಕೋರ್ಟ್ನಿ ವಾಲ್ಷ್, ಕ್ರಿಸ್ ಗೇಲ್, ಆಂಡ್ರೆ ರಸೆಲ್ ಮುಂತಾದ ಕ್ರಿಕೆಟ್ ದಂತಕಥೆಗಳನ್ನು ಸೃಷ್ಟಿಸಿದ ಜಮೈಕಾದಲ್ಲಿ ಬೆಳೆದರು.ಎಂಟು ಒಲಿಂಪಿಕ್ ಚಿನ್ನದ ಪದಕಗಳು ಮತ್ತು 11 ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕಗಳ ಅಸಾಧಾರಣ ದಾಖಲೆಯನ್ನು ಹೊಂದಿರುವ ಬೋಲ್ಟ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಓಟಗಾರ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

ಅವರು 2017 ರಲ್ಲಿ ಅಥ್ಲೆಟಿಕ್ಸ್ನಿಂದ ನಿವೃತ್ತರಾದರು, ಇದೀಗ ಬೋಲ್ಟ್ ತನ್ನ ದೇಶವನ್ನು ಬ್ಯಾಟ್ ಮತ್ತು ಚೆಂಡಿನೊಂದಿಗೆ ಪ್ರತಿನಿಧಿಸುವ ಉತ್ಸಾಹವನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಹುಚ್ಚು ಕೆರಿಬಿಯನ್ನಲ್ಲಿ ಬೆಳೆದ ಬೋಲ್ಟ್, ಜಗತ್ತು ಕಂಡ ಅತ್ಯಂತ ವೇಗದ ಓಟಗಾರನಾಗುವ ಮೊದಲು ಮೂಲತಃ ಅವರೊಬ್ಬ ವೇಗದ ಬೌಲರ್ ಆಗಿದ್ದರು.

ತನ್ನ ಪ್ರೌಢಶಾಲಾ ದಿನಗಳಲ್ಲಿ ಕ್ರಿಕೆಟ್ ಅವರ ಮೊದಲ ಪ್ರೀತಿಯ ಕ್ರೀಡೆಯಾಗಿತ್ತು.ನಂತರ ಕ್ರೀಡಾ ಇತಿಹಾಸದ ಹಾದಿಯನ್ನು ಬದಲಾಯಿಸಿತು, ಆದರೆ ಬೋಲ್ಟ್ ಎಂದಿಗೂ ಕ್ರಿಕೆಟ್ ಮೇಲಿನ ತನ್ನ ಪ್ರೀತಿಯನ್ನು ಮರೆಮಾಡಲಿಲ್ಲ.

ಈ ಬಾರಿಯ ಒಲಿಂಪಿಕ್ ಕ್ರೀಡಾಕೂಟಕ್ಕೆ ಜಮೈಕಾ ಪರ ಮರಳುವ ಬಯಕೆಯನ್ನು ವ್ಯಕ್ತಪಡಿಸುತ್ತಾ “ನಾನು ವೃತ್ತಿಪರ ಕ್ರೀಡೆಯಿಂದ ಸಂತೋಷದಿಂದ ನಿವೃತ್ತನಾಗಿದ್ದೇನೆ. ನಾನು ಬಹಳ ಸಮಯದಿಂದ ಕ್ರಿಕೆಟ್ ಆಡಿಲ್ಲ, ಆದರೆ ಜಮೈಕಾ ಕ್ರಿಕೆಟ್ ತಂಡವು ಕರೆ ಮಾಡಿದರೆ, ನಾನು ಸಿದ್ಧನಾಗಿರುತ್ತೇನೆ! ಎಂದು” ಬೋಲ್ಟ್ ಹೇಳಿದರು.

