ಇಂದೋರ್ ನಗರವನ್ನು ಭಿಕ್ಷುಕ ಮುಕ್ತ ನಗರವನ್ನಾಗಿ ಮಾಡಲು ನಿರ್ಧರಿಸಿರುವ ಅಧಿಕಾರಿಗಳು,ವಿಶೇಷ ಅಭಿಯಾನವನ್ನು ಆರಂಭಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 6,500 ಭಿಕ್ಷುಕರನ್ನು ಗುರುತಿಸಿ,ಅವರಿಗೆ ಸಲಹೆ ನೀಡಿ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರಾಫ್ ಬಜಾರ್ನಲ್ಲಿ ಚಕ್ರದ ಕೈಬಂಡಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ವ್ಯಕ್ತಿ ಮಂಗಿಲಾಲ್ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು ಆತನನ್ನು ಪ್ರಶ್ನಿಸಿದಾಗ ನಂಬಲಾಗದ ಸಂಗತಿಗಳು ಬೆಳಕಿಗೆ ಬಂದವು.

ಆತನ ಆದಾಯದ ವಿಷಯ ತಿಳಿದ ಅಧಿಕಾರಿಗಳು ಆಘಾತಕ್ಕೊಳಗಾದರು. ಭಿಕ್ಷುಕ ಮಂಗಿಲಾಲ್ ಒಟ್ಟು ಮೂರು ಮನೆಗಳನ್ನು ಹೊಂದಿದ್ದಾನೆ. ಭಗತ್ ಸಿಂಗ್ ನಗರದಲ್ಲಿ ಮೂರು ಅಂತಸ್ತಿನ ಮನೆ, ಅಲ್ವಾಸದಲ್ಲಿ 1 ಒಂದು ಬೆಡ್ ರೂಂ ಫ್ಲಾಟ್ ಮತ್ತು ಶಿವನಗರದಲ್ಲಿ 600 ಚದರ ಅಡಿ ಅಪಾರ್ಟ್ಮೆಂಟ್. ಅಂಗವೈಕಲ್ಯದ ಆಧಾರದ ಮೇಲೆ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ರೆಡ್ಕ್ರಾಸ್ ಸೊಸೈಟಿಯ ಮೂಲಕ ಒಂದು ಬೆಡ್ ರೂಂನ ಫ್ಲಾಟ್ ಅನ್ನು ಪಡೆದಿದ್ದಾನೆ
ಆತನ ಬಳಿ ಮೂರು ಆಟೋಗಳಿದ್ದು ಅವುಗಳನ್ನು ಬಾಡಿಗೆಗೆ ನೀಡುವ ಮೂಲಕ ಮಾಸಿಕ ಭಾರಿ ಆದಾಯವನ್ನು ಗಳಿಸುತ್ತಿದ್ದಾನೆ, ಅಲ್ಲದೆ ಸ್ವಿಫ್ಟ್ ಡಿಜೈರ್ ಕಾರನ್ನು ಸಹ ಹೊಂದಿದ್ದು.ಅದಕ್ಕಾಗಿ ಚಾಲಕನನ್ನು ಸಹ ಕೂಡಾ ನೇಮಿಸಿಕೊಂಡಿದ್ದಾನೆ, ಸರಾಫ್ ಬಜಾರ್ನಲ್ಲಿರುವ ಕೆಲವು ಚಿನ್ನದ ವ್ಯಾಪಾರಿಗಳಿಗೆ ಮಂಗೀಲಾಲ್ ಲಕ್ಷಾಂತರ ರೂಪಾಯಿ ಬಡ್ಡಿಗೆ ಹಣ ನೀಡಿ ತಿಂಗಳಿಗೆ ಭಾರೀ ದೊಡ್ಡ ಮೊತ್ತದ ಬಡ್ಡಿ ವಸೂಲಿ ಮಾಡುತ್ತಿದ್ದಾನೆ.

ಅಂಗವಿಕಲ ಮಂಗಿಲಾಲ್ ಪ್ರತಿದಿನ ಇಂದೋರ್ನ ಸರಾಫಾ ಬಜಾರಿಗೆ ಭೇಟಿ ನೀಡುತ್ತಾನೆ, ಮತ್ತು ದಾರಿಹೋಕರು ನೀಡುವ ಹಣದಿಂದ ಪ್ರತಿದಿನ 500 ರಿಂದ 1000 ರೂ.ಗಳನ್ನು ಸಂಗ್ರಹಿಸುತ್ತಾನೆ. ಮಂಗಿಲಾಲ್ ಪ್ರಸ್ತುತ ತನ್ನ ಹೆತ್ತವರೊಂದಿಗೆ ಅಲ್ವಾಸಾದ ತನ್ನ ಫ್ಲಾಟ್ನಲ್ಲಿ ವಾಸಿಸುತ್ತಿದ್ದರೆ, ಅವರ ಇಬ್ಬರು ಸಹೋದರರು ಪ್ರತ್ಯೇಕವಾಗಿ ಫ್ಲಾಟಿನಲ್ಲಿ ವಾಸಿಸುತ್ತಿದ್ದಾರೆ.
ಇದೀಗ ಮಂಗಿಲಾಲ್ ನನ್ನು ವಶಕ್ಕೆ ಪಡೆದ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ಮಂಗಿಲಾಲ್ ಭಿಕ್ಷಾಟನೆ ಮೂಲಕ ಗಳಿಸಿದ ಹಣವನ್ನು ಈ ಆಸ್ತಿಗಳಾಗಿ ಪರಿವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. “ಭಿಕ್ಷುಕನೊಬ್ಬ ಕೋಟ್ಯಾಧಿಪತಿಯಾಗುವ ಹಿಂದೆ ಯಾವುದೇ ಮಾಫಿಯಾ ಇದೆಯೇ ಎಂದು ನಾವು ಆಳವಾಗಿ ತನಿಖೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿ ದಿನೇಶ್ ಮಿಶ್ರಾ ಹೇಳಿದ್ದಾರೆ.

