ಮಂಗಳೂರು : ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಸಹಯೋಗದೊಂದಿಗೆ ಸಮಾಜಸೇವೆಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ನೀಡಲಾಗುವ “ಲಯನ್ಸ್ ಅಶೋಕ ಸೇವಾ ರತ್ನ ಪ್ರಶಸ್ತಿ” ಯನ್ನು ಈ ವರ್ಷ ಪ್ರಥಮ ಬಾರಿಗೆ ಘೋಷಿಸಲಾಗಿದೆ ಎಂದು ಲಯನ್. ಡಾ|ನವೀನ್ ಶೆಟ್ಟಿಯವರು ಹೇಳಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರತಿಷ್ಠಿತ ಮೊದಲ ಪ್ರಶಸ್ತಿಯನ್ನು ಖ್ಯಾತ ಸಮಾಜಸೇವಕ ಮತ್ತು ಮುಳುಗು ತಜ್ಞ ಶ್ರೀ ಈಶ್ವರ ಮಲ್ಪೆ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯೊಂದಿಗೆ 25,000/- ನಗದು ಪುರಸ್ಕಾರವನ್ನು ಸಹ ನೀಡಿ ಸನ್ಮಾನಿಸಲಾಗುವುದು ಎಂದರು,
ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 26 ರಂದು ಮಂಗಳೂರಿನ ಕದ್ರಿ ಸರ್ಕಿಟ್ ಹೌಸ್ ಬಳಿಯಿರುವ ಅಶೋಕನಗರದ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಲಿದೆ, ಈ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಲಯನ್ ಕುಡ್ಪಿ ಅರವಿಂದ್ ಶೆಣೈ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಶಿಕ್ಷಣ, ಆರೋಗ್ಯ, ಮಾನವೀಯ ಸೇವೆ ಹಾಗೂ ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ), ಶ್ರೀ ಈಶ್ವರ್ ಮಲ್ಪೆ ಅವರ ನಿಸ್ವಾರ್ಥ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ. ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ ಮುಂದಿನ ವರ್ಷಗಳಿಂದಲೂ ಪ್ರತಿವರ್ಷ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುವ ಮೂಲಕ ಸೇವಾ ಮನೋಭಾವವನ್ನು ಉತ್ತೇಜಿಸುವ ಸಂಕಲ್ಪವನ್ನು ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ ವಸಂತ ಶೆಟ್ಟಿ, ನಾರಾಯಣ ಎಂ, ಚರಣ್ ಆಳ್ವ,ನರೇಶ್ ಶೆಟ್ಟಿ,ನಿಖಿಲ್ ಶೆಟ್ಟಿ, ಪ್ರಶಾಂತ್ ಬಿ.ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


