ಮಂಗಳೂರು : ಹಿಂದೂ ಸಮಾಜದ ಏಕತೆ ಬಂಧುಗಳ ಏಕತೆ, ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಬಲಪಡಿಸುವ ಮಹತ್ತರ ಉದ್ದೇಶದಿಂದ ಮಂಗಳೂರು ತಾಲೂಕಿನ ಎಡಪದವು,ಮಳಲಿ,ಗುರುಪುರ,ಪೆರ್ಮಂಕಿ, ಕೆಂಜಾರು,ಬಜಪೆ,ಎಕ್ಕಾರು ಮಂಡಲಗಳಲ್ಲಿ ಫೆಬ್ರವರಿ ತಿಂಗಳಲ್ಲಿ ‘ಹಿಂದೂ ಸಂಗಮ’ ಆಯೋಜಿಸಲಾಗಿದ್ದು ಈ ಮೂಲಕ ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಹಿಂದು ಸಂಗಮ ಆಯೋಜನ ಸಮಿತಿ ಗುರುಪುರ ಕೈಕಂಬ, ಕಿನ್ನಿಕಂಬಳ ಇದರ ಗೌರವಾಧ್ಯಕ್ಷರಾದ ವಜ್ರದೇಹಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಮಂಗಳೂರಿನ ಕದ್ರಿಯಲ್ಲಿರುವ ವಿಶ್ವಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು,ಅವಿನಾಶಿ ಸನಾತನ ಸಂಸ್ಕೃತಿಯ ಅಂತಃಸತ್ವವನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಮೂಲಕ ಅದರ ಮೌಲ್ಯಗಳು,ಧಾರ್ಮಿಕ ಆಸೆಗಳು ಹಾಗೂ ಸಾಮಾಜಿಕ ಸಾಮರಸ್ಯವನ್ನು ಉದ್ದೀಪನಗೊಳಿಸಿ,ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸುವ ದಿಶೆಯಲ್ಲಿ ಈ ಪ್ರಯತ್ನ ಸಾಗುತ್ತಿದೆ. ಇದರೊಂದಿಗೆ ಸಾಮರಸ್ಯ, ಕುಟುಂಬ ಪದ್ಧತಿ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆಗಳನ್ನು ಆಚರಣೆಯ ಮೂಲಕ ಅಳವಡಿಸಿಕೊಂಡು, ವ್ಯಕ್ತಿಯಿಂದ ಸಮಾಜದವರೆಗೆ ಸಕಾರಾತ್ಮಕ ಪರಿವರ್ತನೆಯನ್ನು ರೂಪಿಸುವ ವೇದಿಕೆಯಾಗಿಯೂ ಈ ಕಾರ್ಯಕ್ರಮ ಕಾರ್ಯನಿರ್ವಹಿಸುತ್ತದೆ.ಈ ಆಶಯದೊಂದಿಗೆ ಗುರುಪುರ ತಾಲೂಕಿನ ವಿವಿಧ ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರ್ಲ, ಸಂಯೋಜಕ ಕೃಷ್ಣ ಕೊಂಪದವು, ಕಾರ್ಯದರ್ಶಿ ಕೃಷ್ಣ ಕಜೆಪದವು,ಉಪಾಧ್ಯಕ್ಷ ರಾಜೀವ ಶೆಟ್ಟಿ ಪರ್ಮಂಕಿ ಹಾಗೂ ಮಹಿಳಾ ಪ್ರಮುಖ್ ಗೀತಾ ಲಕ್ಷ್ಮಿ ಬಜಪೆ ಉಪಸ್ಥಿತರಿದ್ದರು.

