ಮಂಗಳೂರು : 2026ರ ಹೊಸ ವರ್ಷದ ಶುಭಾರಂಭದ ಸಂದರ್ಭದಲ್ಲಿ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ 110 ವರ್ಷಗಳ ಇತಿಹಾಸದಲ್ಲೇ ಅಪೂರ್ವ ಸಾಧನೆಯೊಂದಾಗಿ ಮಂಗಳೂರು ತಾಲ್ಲೂಕು ಘಟಕಕ್ಕೆ ಸರ್ಕಾರದಿಂದ ಅರ್ಧ ಎಕರೆ ಜಾಗ ಮಂಜೂರಾಗಿದೆ ಎಂದು ಮಂಜುನಾಥ್ ರೇವಣ್ಕರ್ ತಿಳಿಸಿದ್ದಾರೆ.

ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್ ಈ ಬಗ್ಗೆ ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಜೇಶ್ ಅವರ ವಿನಂತಿ ಪತ್ರದ ಆಧಾರದ ಮೇಲೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಈ ಐತಿಹಾಸಿಕ ಕೊಡುಗೆ ಲಭಿಸಿದೆ. ಇಡೀ ಕನ್ನಡಿಗರ ಪರವಾಗಿ ಕರ್ನಾಟಕ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ವಾಮಂಜೂರು ಸಮೀಪದ ತಿರುವೈಲು ಗ್ರಾಮದ ಸರ್ವೇ ನಂ. 61/3ರಲ್ಲಿ 50 ಸೆಂಟ್ಸ್ ಜಾಗವನ್ನು ಕನ್ನಡ ಭವನ ನಿರ್ಮಾಣಕ್ಕಾಗಿ ಸರ್ಕಾರ ಮಂಜೂರು ಮಾಡಿದ್ದು, ಈ ಸಂಬಂಧ ಅಧಿಕೃತ ಆದೇಶ ಪತ್ರವೂ ಜಾರಿಯಾಗಿದೆ. ಈ ಜಾಗದಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ‘ಕನ್ನಡ ಭವನ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಸಹಕಾರದಿಂದ ಈ ಮಹತ್ವದ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು , ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಜಿರೆ, ಕಸಾಪ ಮಂಗಳೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಡಾ. ಮುರಳಿ ಮೋಹನ್ ಚೂಂತಾರು, ಗಣೇಶ್ ಪ್ರಸಾದ್ ಜಿ., ಕಾರ್ಯದರ್ಶಿ ಸುಭ್ರಾಯ ಭಟ್ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು.

