ಧಾರವಾಡ : ನಗರದ ಮದಿಹಾಳ ಸಿದ್ಧಾರೂಢ ಕಾಲೋನಿಯ ಶ್ರೀಸಿದ್ಧಾರೂಢಮಠದ 2ನೆಯ ವರ್ಷದ ವಾರ್ಷಿಕ ಜಾತ್ರಾಮಹೋತ್ಸವ ಜ.30 ರಂದು (ಶುಕ್ರವಾರ) ಜರುಗುವುದು. ಜಾತ್ರೆಯ ದಿನ ಪ್ರಾತಃಕಾಲದಲ್ಲಿ ಶ್ರೀಸಿದ್ಧಾರೂಢರ ಹಾಗೂ ಶ್ರೀಗುರುನಾಥಾರೂಢರ ವಿಗ್ರಹಗಳಿಗೆ ಏಕಾದಶ ಮಹಾರುದ್ರಾಭಿಷೇಕ ನಂತರ ವಿಶೇಷ ಹೋಮ ನಡೆಯಲಿದೆ.

ನೂತನ ರಥ ನಿರ್ಮಾಣ : ಆಧ್ಯಾತ್ಮವಾದಿ, ಅನುಭಾವಿ ನಿವೃತ್ತ ಅಧ್ಯಾಪಕಿ ದಾಕ್ಷಾಯಣಮ್ಮ ಹೂಗಾರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವ ನೂತನ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಹಾಗೂ ವಿಜಯನಗರ ಜಿಲ್ಲೆ ಹಂಪಸಾಗರ ನವಲಿಹಿರೇಮಠದ ಶ್ರೀಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಸಂಜೆ 4-30 ಗಂಟೆಗೆ ರಥೋತ್ಸವವನ್ನು ಉದ್ಘಾಟಿಸುವರು.
ಆಧ್ಯಾತ್ಮ ಪ್ರವಚನ : ರಥೋತ್ಸವದ ನಂತರ ಸಂಜೆ 7 ಗಂಟೆಗೆ ಮಠದ ಆವರಣದಲ್ಲಿ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಧರ್ಮಸಮಾರಂಭದಲ್ಲಿ ಹಂಪಸಾಗರ ನವಲಿಹಿರೇಮಠದ ಶ್ರೀಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಧ್ಯಾತ್ಮ ಪ್ರವಚನ ನೀಡುವರು. ವಿಜಯಪುರದ ಹಿರಿಯ ಅನುಭಾವಿ ಸಿದ್ಧಪ್ಪ ಬಿದರಿ ಮಾತನಾಡುವರು. ಜಾತ್ರೆಯ ಅಂಗವಾಗಿ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ನಡೆಯುವುದು.
ಜ.31 ರಂದು ಮುಂಜಾನೆ 8-30 ಗಂಟೆಗೆ ಶ್ರೀಸಿದ್ಧಾರೂಢರ ಪಲ್ಲಕ್ಕಿ ಉತ್ಸವ, ಸಂಜೆ 5 ಗಂಟೆಗೆ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮಗಳು, 7 ಗಂಟೆಗೆ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ ಕಲಾತಂಡದಿಂದ ಜಾನಪದ ಸಂಜೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.


