ಡೆಹ್ರಾಡೂನ್ : ಉತ್ತರಾಖಂಡ ರಾಜ್ಯದ ಬದರಿನಾಥ ಮತ್ತು ಕೇದಾರನಾಥ, ದೇವಾಲಯಗಳಿಗೆ ಹಿಂದೂಯೇತರರಿಗೆ ಶೀಘ್ರದಲ್ಲೇ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಪ್ರಕಟಿಸಿದೆ. ಈ ಪ್ರಸ್ತಾವನೆಯು ಸಮಿತಿಯ ಮುಂದಿನ ಸಭೆಯಲ್ಲಿ ಅನುಮೋದನೆಗಾಗಿ ಕಾಯುತ್ತಿದೆ.

ಉತ್ತರಾಖಂಡದ ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಅತ್ಯಂತ ಮಹತ್ವದ್ದಾಗಿದ್ದ ದೇವಭೂಮಿ ಉತ್ತರಾಖಂಡದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವ” ಗುರಿಯನ್ನು ಹೊಂದಿದೆ, ಎಂದು ಬದರೀನಾಥ- ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಹೇಮಂತ್ ದ್ವಿವೇದಿ ಘೋಷಣೆ ಮಾಡಿದ್ದಾರೆ. ಬದರೀನಾಥ, ಕೇದಾರನಾಥ ಮತ್ತು ಸಮಿತಿಯ ಅಡಿಯಲ್ಲಿರುವ ಎಲ್ಲಾ 45 ದೇವಾಲಯಗಳಿಗೆ ಈಗ ಹಿಂದೂಯೇತರರಿಗೆ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉತ್ತರಾಖಂಡದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವುದು ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಎಂದು ಹೇಮಂತ್ ದ್ವಿವೇದಿ ವಾದಿಸುತ್ತಾರೆ. ಚಾರ್ ಧಾಮ್ ಮತ್ತು ಇತರ ದೇವಾಲಯಗಳು ಪಿಕ್ನಿಕ್ ತಾಣಗಳು ಅಥವಾ ಪ್ರವಾಸಿ ತಾಣಗಳಲ್ಲ, ಬದಲಾಗಿ ಸನಾತನ ಧರ್ಮದ ಸರ್ವೋಚ್ಚ ಯಾತ್ರಾ ಸ್ಥಳಗಳಾಗಿವೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ಸಂಪ್ರದಾಯಗಳನ್ನು ತಿರುಚಲಾಗಿದ್ದು, ಈಗ ಅವುಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಈಗ ವಿಪರೀತ ಹಿಮಪಾತವಾಗುತ್ತಿದ್ದು ಚಳಿಗಾಲದ ರಜೆಯ ನಂತರ ಬದರಿನಾಥ ದೇವಾಲಯ ಏಪ್ರಿಲ್ 23 ರಂದು ಮತ್ತೆ ತೆರೆಯಲು ನಿರ್ಧರಿಸಲಾಗಿದ್ದು, ಕೇದಾರನಾಥ ದೇವಾಲಯದ ಪುನರಾರಂಭ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದಿದ್ದಾರೆ.


