ಮಂಗಳೂರು: ನೀರುಮಾರ್ಗ ಸಮೀಪದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.2ರಿಂದ ಫೆ.11ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಶ್ರೀ ಶಶಿಧರ್ ಭಟ್ ಅವರು ಹೇಳಿದರು.

ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರದಲ್ಲಿ 16 ವರ್ಷಗಳ ನಂತರ 2 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡು ಫೆ.2ರಿಂದ ಮೊದಲ್ಗೊಂಡು ದಿನಾಂಕ 11ತನಕ ವೇದಮೂರ್ತಿ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳು ಶಿಬರೂರು ಇವರ ನೇತ್ರತ್ವದಲ್ಲಿ ಶ್ರೀ ಸುಬ್ರಾಯ ದೇವರು,ಗಣಪತಿ, ಪಾರ್ವತಿ ದೇವರಿಗೆ ಅಷ್ಟಬಂಧ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವನ್ನು ವಿವಿಧ ಧಾರ್ಮಿಕ ಆಗಮೋಕ್ತ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗುವುದೆಂದು ಹೇಳಿದರು,

ಮಾಣೂರು ಕ್ಷೇತ್ರವು ಬಹಳ ಪುರಾತನ ಕ್ಷೇತ್ರವಾಗಿದ್ದು ಪೂರ್ವದಲ್ಲಿ ಮಣ್ವ ಋಷಿಗಳು ತಪಸ್ಸು ಮಾಡಿ ಶ್ರೀ ಸುಬ್ರಾಯ ದೇವರನ್ನು ಒಲಿಸಿ ಪ್ರತಿಷ್ಠಾಪಿಸಿದ ಮಹಾನ್ ಕ್ಷೇತ್ರ ಇದಾಗಿದೆ. ತುಳುವ ನಾಡಿನ ಪರಶುರಾಮ ಸೃಷ್ಠಿಯ ಮುಖ್ಯ ನಾಗಾರಾಧನೆಯ ಪುಣ್ಯ ಭೂಮಿ ಸ್ವರ್ಣ ಕೇದಗೆಯ ಬೀಡು ಇದಾಗಿದೆ. ಕೇದಾರನೆಂಬ ಬ್ರಾಹ್ಮಣ ದಂಪತಿಗಳು ಆರಾಧಿಸಿಕೊಂಡು ಬಂದು ಸಂತಾನ ಇಲ್ಲದ ಕಾಲದಲ್ಲಿ ನಾಗರ ಹಾವೊಂದು ತನ್ನ ಬಾಯಲ್ಲಿ ತತ್ತಿ ಹಿಡಿದುಕೊಂಡು ಸಂಚರಿಸುವುದನ್ನು ಕಂಡು ಭಕ್ತಿಯಿಂದ ಪ್ರಾರ್ಥಿಸಿ ಸಂತಾನ ಪಡೆದ ಪುಣ್ಯ ಭೂಮಿ. ತುಳುವ ನಾಡಿನ ನಯನ ಮೋಹಕವಾದ ಪರಿಸರದಲ್ಲಿ ಕೇಳಿದ್ದನ್ನು ಅನುಗ್ರಹಿಸುವ ಸ್ವಾಮಿಯೇ ಸುಬ್ರಾಯ ದೇವರು. ಪೂರ್ವದಲ್ಲಿ ಅನಂತ ಪದ್ಮನಾಭ ಸುಬ್ರಹ್ಮಣ್ಯ ಎಂಬ ಹೆಸರನ್ನು ಪಡೆದಿತ್ತು ಎಂದರು

ನಂತರ ಬ್ರಹ್ಮ ಕಲಶೋತ್ದವ ಸಮಿತಿಯ ಕಾರ್ಯಾದ್ಯಕ್ಷರಾದ ನಳೀಲ್ ಕುಮಾರ್ ಕಟೀಲ್ ಮಾತನಾಡಿ ಫೆ.1ರಂದು ಭಾನುವಾರ ಸಂಜೆ 3.00ರಿಂದ ಹಸಿರು ಹೊರೆಕಾಣಿಕೆ ವೇದವ್ಯಾಸ ತಂತ್ರಿ ಶಿಬರೂರು ಇವರ ದಿವ್ಯ ಉಪಸ್ಥಿತಿಯಲ್ಲಿ ಸೀಮೆಗೆ ಸಂಬಂದಪಟ್ಟ 7 ಗ್ರಾಮಗಳು, ದೇವಸ್ಥಾನ,ನಾನಾ ಸಂಘಸಂಸ್ಥೆಗಳು ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಹೊರಕಾಣಿಕೆ ನೀರುಮಾರ್ಗ ಜಂಕ್ಷನ್ನಿಂದ ಪಾದಯಾತ್ರೆ ಮೂಲಕ ಹೊರಟು ಕುಟ್ಟಿಕಳ, ಓಂಟೆಮಾರ್, ಕೆಂಪುಗುಡ್ಡೆ, ಅಡ್ಯಾರ್ಪದವು, ಕೊಲ್ದಾರ್ ಮೂಲಕ ಮಾಣೂರು ಕ್ಷೇತ್ರಕ್ಕೆ ಆಗಮಿಸುವುದು. ಮಾಣೂರು ಕ್ಷೇತ್ರಕ್ಕೆ ಹೊರಡಲಿದೆ.ಈ ಮೆರವಣಿಗೆಯಲ್ಲಿ ನಾನಾ ಕಲಾ ತಂಡಗಳು, ಸಂಘ-ಸಂಸ್ಥೆಗಳು ಭಾಗವಹಿಸಲಿವೆ ಎಂದರು.

ಫೆ.8ರಂದು ಬೆಳಗ್ಗೆ 9.35ಕ್ಕೆ ಶ್ರೀ ಸುಬ್ರಾಯ ದೇವರಿಗೆ ಬ್ರಹ್ಮಕಲಶಾಭಿಷೇಕ ನಂತರ ಪರಿಕಲಶಾಭಿಷೇಕ, ರುದ್ರಯಾಗ, ದುರ್ಗಾಹೋಮ, ಮಹಾಪೂಜೆ ನೂತನ ಧ್ವಜಾರೋಹಣ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ. ಮಧ್ಯಾಹ್ನ 1.00 ರಿಂದ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿಗಾನಾಮೃತ, ಸಂಜೆ 3.30ರಿಂದ ಕೀರ್ತನಾಮೃತ ನೃತ್ಯಕಲಾಭಾರತಿ ತಂಡ ಮತ್ತು ಸುಬ್ರಹ್ಮಣ್ಯ ಭಜನಾ ಮಂಡಳಿ. ಸಂಜೆ 5.00ರಿಂದ : ಸಭಾ ಕಾರ್ಯಕ್ರಮ, ರಾತ್ರಿ 7.00ರಿಂದ : ಹೂವಿನ ಪೂಜೆ, ಸಣ್ಣರಂಗ ಪೂಜೆ, ಪಲ್ಲಕ್ಕಿ ಸೇವೆ. ರಾತ್ರಿ 8.00ರಿಂದ ವಿಧಾತ್ರಿ ಕಲಾವಿದೆರ್ ಕುಡ್ಲ ಅಭಿನಯದ ನಾಟಕ ಜೈ ಹನುಮಾನ್ ಪ್ರದರ್ಶನವಾಗಲಿದೆ ಎಂದರು.

ಪ್ರತಿದಿನ ಸಂಜೆ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.ಈಗಾಗಲೇ ಅನ್ನಛತ್ರ, ನೀರಿನ ವ್ಯವಸ್ಥೆ,ಚಪ್ಪರ ನಿರ್ಮಾಣ, ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಬಹ್ಮಕಲಶೋತ್ಸವ ಸಂಧರ್ಭದಲ್ಲಿ ಭಕ್ತಾದಿಗಳಿಗೆ ಆಗಮಿಸಲು ವಾಹನದ ವ್ಯವಸ್ಥೆಯನ್ನು ಕೂಡಾ ಮಾಡಲಾಗುವುದು ಹಾಗೂ ನೂರಾರು ವಾಹನ ಪಾರ್ಕಿಂಗ್ ಮಾಡಲು ಪಾರ್ಕಿಂಗ್ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭಾಸ್ಕರ್ ಕೆ., ಆನಂದ್ ಸರಿಪಲ್ಲ, ಪ್ರಧಾನ ಅರ್ಚಕರಾದ ರಾಜೇಶ್ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕುಂಞಣ್ಣ ಶೆಟ್ಟಿ ಕೋರೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಜೆ. ಮಾಣೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಕೋಟ್ಯಾನ್ ಪಡು, ಉಪಾಧ್ಯಕ್ಷರಾದ ಜಯಶೀಲ ಅಡ್ಯಂತಾಯ, ಎನ್ ವಿಕೆ ಭಟ್ರಕೋಡಿ ಉಪಸ್ಥಿತರಿದ್ದರು.
ಚಿತ್ರ : ಸತೀಶ್ ಕಾಪಿಕಾಡ್

