ಮಂಗಳೂರು : ಸರಕಾರವು ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಅವುಗಳ ಫಲಾನುಭವಿಗಳನ್ನಾಗಿಸುವಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು ಮಹತ್ತರ ಪಾತ್ರ ವಹಿಸುತ್ತಿದೆ. ರಾಜ್ಯದ ಮಹಿಳೆಯರ ಏಳಿಗೆಗಾಗಿ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸಿ ಫೆಬ್ರವರಿ 01 ಮತ್ತು 02 ರಂದು ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ಮೈದಾನದಲ್ಲೂ ಹಾಗೂ ಸಾಂಸ್ಕೃತಿಕ ಸಮ್ಮೇಳನವು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆಬ್ರವರಿ 01 ರಂದು ಬೆಳಿಗ್ಗೆ 8.30ಕ್ಕೆ ಬಲ್ಮಠ ಪದವಿ ಪೂರ್ವ ವಿದ್ಯಾರ್ಥಿನಿಯರ ಕಾಲೇಜು ಆವರಣದಿಂದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ಮೈದಾನದ ತನಕ ವಿವಿಧ ಜಿಲ್ಲೆಗಳ ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣಗಳಿಂದ ಅಲಂಕೃತರಾದ ಮಹಿಳೆಯರು ಮಹಿಳಾ ವಾಹನ ಜಾಥಾ, ಕುದುರೆ ಸವಾರಿ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಮಹಿಳೆಯರ ಜಾಥಾ ಹೊರಡಲಿರುವುದು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ಮೈದಾನದಲ್ಲಿ ನಡೆಯಲಿದ್ದು ಅದೇ ಆವರಣದಲ್ಲಿ ಜಾನಪದ ಕ್ರೀಡೋತ್ಸವದ ಅಂಗವಾಗಿ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯು ನಡೆಯಲಿದೆ ಎಂದರು .
ಆನಂತರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳನ-2026ರ ಅಂಗವಾಗಿ ವಿಚಾರಗೋಷ್ಠಿ, ಸಾಂಸ್ಕೃತಿಕ ಸ್ಪರ್ಧೆ, ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಆಹಾರ ಮೇಳ, ಮಹಿಳೆಯರ ಆರೋಗ್ಯ ತಪಾಸಣೆ ಹಾಗೂ ಅಂಗಾಂಗ ದಾನದ ನೋಂದಣಿ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ಮಹಿಳೆಯರ ಸಶಕ್ತಿಕರಣಕ್ಕಾಗಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಅವಶ್ಯಕತೆಯನ್ನು ಅರಿತುಕೊಂಡು ಸಮ್ಮೇಳನದ ಮೂಲಕ ಮಹಿಳೆಯರ ಸೃಜನಶೀಲತೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು .
ಈ ಸಮ್ಮೇಳನದಲ್ಲಿ ಸನ್ಮಾನ್ಯ ಸಭಾಪತಿಗಳು, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು ಹಾಗೂ ಇತರೇ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆ ಮಹತ್ವದ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದರು .
ರಾಜ್ಯದ ಆಯಾಯ ಜಿಲ್ಲೆಯ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಜೇತ ತಂಡಗಳಿಗೆ ರೂ. 1,00,000/-, ರೂ. 75,000/- ಮತ್ತು ರೂ. 50,000/- ನಗದು ಮತ್ತು ಭಾಗವಹಿಸಿದ ತಂಡಗಳಿಗೆ ರೂ. 10,000/- ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಸಮಾಜಕ್ಕೆ ಅಮೋಘ ಕೊಡುಗೆ ನೀಡಿದ ಮಹಿಳಾ ಸಶಕ್ತಿಕರಣದ ಸಾಧಕಿಯರನ್ನು ಗೌರವಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಮಹಿಳಾ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 1,00,000/-ನಗದು, ಫಲಕ ಮತ್ತು ಗೌರವಾರ್ಪಣೆಗಳನ್ನು ಒಳಗೊಂಡಿರುತ್ತದೆ.
ಯುವ ಸಾಹಿತಿಗಳ ಬರವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 35 ವಯಸ್ಸಿನೊಳಗಿನ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಲೇಖನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಿ ಸಮ್ಮೇಳನದಲ್ಲಿ ಗೌರವಿಸಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಮನೋರಮ ಉಮೇಶನ್, ಕಾರ್ಯದರ್ಶಿ ಅನುರಾಧ, ಖಜಾಂಜಿ ಭಾರತಿ, ರೇಖಾ ಶೆಟ್ಟಿ, ವಿಜಯಲಕ್ಷ್ಮಿ ಹಾಗೂ ಸುಖಲಾಕ್ಷ ಸುವರ್ಣ ಉಪಸ್ಥಿತರಿದ್ದರು.

