ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ಗಳಲ್ಲಿ ಒಬ್ಬರಾದ ಕಾನ್ಫಿಡೆಂಟ್ ಗ್ರೂಪ್ನ ಮಾಲೀಕ ಡಾ. ಸಿ.ಜೆ.ರಾಯ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ತೆರಿಗೆ ವಂಚನೆ ಆರೋಪದಡಿ ಐಟಿ ಅಧಿಕಾರಿಗಳು ನಡೆಸಿದ ದಾಳಿಯಿಂದ ಕಂಗೆಟ್ಟ ಕಾನ್ಫಿಡೆಂಟ್ ಗ್ರೂಪ್ (Confident Group) ಮುಖ್ಯಸ್ಥ ಸಿ.ಜೆ.ರಾಯ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸೂರು ರಸ್ತೆಯ ಲ್ಯಾಂಗ್ಫರ್ಡ್ ಟೌನ್ನಲ್ಲಿರುವ ಕಚೇರಿಯ ಮೇಲೆ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮಧ್ಯಾಹ್ನ ಕಚೇರಿಗೆ ಬಂದಿದ್ದ ರಾಯ್ ಅವರನ್ನು ಅಧಿಕಾರಿಗಳು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.ಈ ವೇಳೆ ಹೆಚ್ಚಿನ ದಾಖಲೆಗಳನ್ನು ತರುವುದಾಗಿ ಹೇಳಿ ಪಕ್ಕದ ಕೊಠಡಿಗೆ ತೆರಳಿದ ಉದ್ಯಮಿ, ತಮ್ಮ ಬಳಿಯಿದ್ದ ಪಿಸ್ತೂಲ್ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ.ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಅವರ ಮೃತದೇಹವನ್ನು ಎಚ್ಎಸ್ಆರ್ ಲೇಔಟ್ನ ನಾರಾಯಣ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಅಶೋಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಹೊರತುಪಡಿಸಿ, ಕಾನ್ಫಿಡೆಂಟ್ ಗ್ರೂಪ್ ಆತಿಥ್ಯ ಮತ್ತು ಹಲವಾರು ರಿಯಾಲಿಟಿ ಶೋ,ಸಿನಿಮಾ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಸಿಜೆ ರಾಯ್ ಅವರು ವ್ಯಾಪಾರ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು ಮತ್ತು ಬೆಂಗಳೂರಿನ ವ್ಯಾಪಾರ ವಲಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದರು.

