ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ನೂತನ ಅಧ್ಯಕ್ಷರಾಗಿ ಜಯಮಾಲಾ ಅವರು ಭರ್ಜರಿ ಗೆಲುವಿನ ಮೂಲಕ ಸ್ಯಾಂಡಲ್ವುಡ್ನ ಚುಕ್ಕಾಣಿ ಹಿಡಿದಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ಭಾ.ಮಾ. ಹರೀಶ್ ಅವರ ವಿರುದ್ಧ 170 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಈ ಕುತೂಹಲಕಾರಿ ಚುನಾವಣೆಯಲ್ಲಿ ಈ ಬಾರಿ ಒಟ್ಟು 813 ಮತಗಳು ಚಲಾವಣೆ ಆಗಿದ್ದು ಇದರಲ್ಲಿ 512 ಮತಗಳನ್ನು ಪಡೆಯುವ ಮೂಲಕ ಜಯಮಾಲಾ ಅವರು ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ.

ಜಯಮಾಲಾ ಅವರ ಪ್ರತಿಸ್ಪರ್ಧಿ ಭಾ.ಮಾ ಹರೀಶ್ ಅವರು ತೀವ್ರ ಪೈಪೋಟಿ ನೀಡಿದರೂ, ಜಯಮಾಲಾ ಅವರ ಅನುಭವ ಮತ್ತು ಚಿತ್ರರಂಗದಲ್ಲಿ ಅವರಿಗಿರುವ ಪ್ರಭಾವದ ಮುಂದೆ ಗೆಲುವು ಸಾಧ್ಯವಾಗಲಿಲ್ಲ. ಜಯಮಾಲಾ ಅವರ ಈ ಗೆಲುವನ್ನು ಚಿತ್ರರಂಗದ ಗಣ್ಯರು ಮತ್ತು ಅವರ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ.
ಜಯಮಾಲಾ ಅವರು ಈ ಹಿಂದೆ 2008 ರಲ್ಲಿ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.ಈಗ ಸುಮಾರು 18 ವರ್ಷಗಳ ನಂತರ ಮತ್ತೊಮ್ಮೆ ಮಂಡಳಿಯ ಜವಾಬ್ದಾರಿ ಅವರ ಹೆಗಲಿಗೇರಿದೆ. ಚಿತ್ರರಂಗದ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿರುವ ಮತ್ತು ರಾಜಕೀಯವಾಗಿಯೂ ಜಯಮಾಲಾ ಅವರು ಹೆಚ್ಚಿನ ಪ್ರಭಾವ ಹೊಂದಿದ್ದಾರೆ.ಇವರ ನಾಯಕತ್ವದಲ್ಲಿ ಚಿತ್ರರಂಗದಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ಆಶಯ ವ್ಯಕ್ತವಾಗಿದೆ.
ಆಯ್ಕೆಯಾದ ಬಳಿಕ ಮಾತನಾಡಿದ ಅವರು, ಚಿತ್ರರಂಗದ ಹಿರಿಯರು ಮತ್ತು ಕಿರಿಯರು ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಈ ಜವಾಬ್ದಾರಿ ನೀಡಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕನ್ನಡ ಚಿತ್ರರಂಗದ ಏಳಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

