ಕಲಬುರಗಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. 53.47 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಬಜೆಟ್ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಆದ್ರೆ ಕರ್ನಾಟಕಕ್ಕೆ ಹೇಳಿಕೊಳ್ಳುವಂತ ಯೋಜನೆಗಳು ಸಿಕ್ಕಿಲ್ಲ ಎಂದು ಕೇಂದ್ರ ಬಜೆಟ್ ಕುರಿತಂತೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ. ನಾವು ಅನೇಕ ಮಹತ್ವದ ಯೋಜನೆಗಳಿಗೆ ಅನುದಾನ ಕೋರಿದ್ದೆವು, ಆದರೆ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯ ಮಾಡಿದೆ.
ಬಜೆಟ್ನಲ್ಲಿ ಕರ್ನಾಟಕದ ಪಾಲಿನ ಬಗ್ಗೆ ಮಾತನಾಡುತ್ತಾ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಏನಾದರೂ ಕೊಟ್ಟಿದ್ದರೆ ಅದು ಕೇವಲ ಚೊಂಬು ಮಾತ್ರ. ನಾವು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಅತಿ ಹೆಚ್ಚು ಹಣ ನೀಡುತ್ತೇವೆ,ಆದರೆ ಪ್ರತಿಯಾಗಿ ನಮಗೆ ಸಿಗುತ್ತಿರುವುದು ಶೂನ್ಯ. ಇದು ದಕ್ಷಿಣ ಭಾರತದ ರಾಜ್ಯಗಳ ಮೇಲೆ ನಡೆಯುತ್ತಿರುವ ಆರ್ಥಿಕ ದೌರ್ಜನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಕರ್ನಾಟಕ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತವನ್ನು ಈ ಬಜೆಟ್ ಕಡೆಗಣಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ದಶಕಗಳ ಕನಸಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಬಜೆಟ್ನಲ್ಲಿ ಯಾವುದೇ ಪ್ರಸ್ತಾಪ ಅಥವಾ ಅನುದಾನದ ಘೋಷಣೆ ಇಲ್ಲದಿರುವುದು ರಾಜ್ಯದ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ತೆರಿಗೆ ಪಾವತಿಯಲ್ಲಿ ನಮ್ಮ ರಾಜ್ಯ ದೇಶದಲ್ಲೇ ನಂಬರ್ ಒನ್ ಆದರೆ ನಮಗಿಂತ ಚಿಕ್ಕ ರಾಜ್ಯಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದಾರೆ. ನಮಗೂ ನ್ಯಾಯ ಕೊಡಿ ಅಂತ ಹಣಕಾಸು ಮಂತ್ರಿಗೆ ಭೇಟಿ ಆಗಿದ್ದೆ. ಆದ್ರೂ ನಮಗೆ ಅವರು ಕೊಟ್ಟಿಲ್ಲ ಅಂತ ಕಿಡಿಕಾರಿದ್ರು.
ಮೆಟ್ರೋ ರೈಲಿಗೆ ಹಣ ಕೊಟ್ಟಿಲ್ಲ, ರಾಯಚೂರು ಏಮ್ಸ್ಗೆ ಕೊಡಿ ಅಂತ ಮನವಿ ಕೊಟ್ರು ಅವರು ಕೊಟ್ಟಿಲ್ಲ. ಕೆಕೆಆರ್ಡಿಬಿ ಗೆ ಮ್ಯಾಚಿಂಗ್ ಗ್ರಾಂಟ್ ಕೊಡಿ ಅಂತ ಕೇಳಿದ್ದೇವೆ ಒಂದು ಶಬ್ದ ಇಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ 13 ಸಾವಿರ ಕೊಟ್ಟಿದ್ದೇನೆ. ಕರ್ನಾಟಕ ರಾಜ್ಯ ಟಾಕ್ಸ್ ಕಟ್ಟೋದು 4.5 ರಿಂದ 5 ಲಕ್ಷ ಕೋಟಿ ತೆರಿಗೆ ಕೊಡ್ತೇವೆ. ನಮಗೆ 14 ಪರ್ಸೆಂಟ್ ಕೊಡ್ತಾರೆ. ಉಳಿದ ಹಣ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತದೆ ಎಂದರು. 2026 27 ಕೇಂದ್ರದ ಬಜೆಟ್ ದೊಡ್ಡ ಅನ್ಯಾಯ ಮಾಡುವ ಬಜೆಟ್. ರಾಜ್ಯಕ್ಕೆ ಚೊಂಬು ಕೊಡುವ ಬಜೆಟ್ ಅಂತ ಕೇಂದ್ರದ ಬಜೆಟ್ ವಿರುದ್ಧ ಸಿಎಂ ಕಿಡಿಕಾರಿದರು.

