ಇಸ್ಲಾಮಾಬಾದ್: ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಪಾಕಿಸ್ತಾನ ಈಗ ಟಿ20 ವಿಶ್ವಕಪ್ನಲ್ಲಿ ಆಡುವುದಾಗಿ ಆದರೆ ಭಾರತದೊಂದಿಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ನಿಲುವು ತೆಗೆದುಕೊಂಡಿದೆ. ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಸಾಮಾಜಿಕ ಮಾಧ್ಯಮಗಳ ಮೂಲಕ ಘೋಷಿಸಿದೆ.
ಬಾಂಗ್ಲಾದೇಶವನ್ನು ವಿಶ್ವಕಪ್ನಿಂದ ಹೊರಹಾಕಿದ್ದನ್ನು ವಿರೋಧಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನ ಟೂರ್ನಮೆಂಟ್ ಅನ್ನು ಬಹಿಷ್ಕರಿಸುತ್ತದೆ ಎಂಬ ವದಂತಿಗಳ ನಡುವೆ ಈ ನಿರ್ಣಾಯಕ ಘೋಷಣೆ ಬಂದಿದೆ.

ಪಾಕಿಸ್ತಾನ ಸರ್ಕಾರವು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಆದರೆ ಫೆಬ್ರವರಿ 15 ರಂದು ಭಾರತದ ವಿರುದ್ಧ ಸ್ಪರ್ಧಿಸಲು ಪಾಕಿಸ್ತಾನ ಕ್ರಿಕೆಟ್ ತಂಡವು ಮೈದಾನಕ್ಕೆ ಇಳಿಯುವುದಿಲ್ಲ” ಎಂದು ಸರ್ಕಾರ ತಿಳಿಸಿದೆ.
ಬಾಂಗ್ಲಾದೇಶ ಪಂದ್ಯಾವಳಿಯಿಂದ ಹೊರಬಿದ್ದ ನಂತರ ಪಾಕಿಸ್ತಾನ ವಿಶ್ವಕಪ್ ಅನ್ನು ಬಹಿಷ್ಕರಿಸಲು ಈ ಹಿಂದೆ ನಿರ್ಧರಿಸಿತ್ತು.ಆದರೆ ಭಾರತ ವಿರುದ್ಧದ ಪಂದ್ಯದಿಂದ ಹಿಂದೆ ಸರಿದರೆ ಭಾರೀ ದಂಡ ಸೇರಿದಂತೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಐಸಿಸಿ ಪಾಕಿಸ್ತಾನ ಕ್ರಿಕೆಟ್ಗೆ ಎಚ್ಚರಿಕೆ ನೀಡಿತ್ತು.
ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಫೆಬ್ರವರಿ 15 ರಂದು ನಿಗದಿಯಾಗಿದ್ದು, ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪಾಕಿಸ್ತಾನದ ಈ ನಿರ್ಧಾರದಿಂದ ಪಂದ್ಯವು ಅನಿಶ್ಚಿತವಾಗಿದೆ.

ಭಾರತ-ಪಾಕಿಸ್ತಾನ ಪಂದ್ಯ ರದ್ದಾದರೆ ಪಿಸಿಬಿ ಪ್ರಸಾರಕರಿಗೆ ಭಾರಿ ನಷ್ಟವನ್ನುಂಟು ಮಾಡಬೇಕಾಗುತ್ತದೆ. ವರದಿಗಳ ಪ್ರಕಾರ 38 ಮಿಲಿಯನ್ ಡಾಲರ್ (ಸುಮಾರು 320 ಕೋಟಿ ರೂ.) ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಲ್ಪನೆಗೂ ಮೀರಿದ ಮೊತ್ತ ಇದು.
ಪಂದ್ಯ ನಡೆಯದಿದ್ದರೆ, ಪ್ರಸಾರಕರು ಪರಿಹಾರಕ್ಕಾಗಿ ಐಸಿಸಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ಈ ಹಂತದಲ್ಲಿ, ಕ್ರಿಕೆಟ್ ಕೌನ್ಸಿಲ್ ಪಿಸಿಬಿಗೆ ನೋಟಿಸ್ ಜಾರಿ ಮಾಡಿ ಮುಂದಿನ ಕ್ರಮ ಕೈಗೊಳ್ಳಬಹುದು. ಪಂದ್ಯವನ್ನು ಬಹಿಷ್ಕರಿಸಿದರೆ ಕಾನೂನು ಮತ್ತು ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಐಸಿಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

