ಮುಂಬೈ : ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದಲ್ಲಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಐವರು ಯುವಕರನ್ನು ಬಂಧಿಸಿದ್ದಾರೆ.
ಮುಂಬೈನ ಜುಹುವಿನಲ್ಲಿರುವ ರೋಹಿತ್ ಶೆಟ್ಟಿ ಅವರ ನಿವಾಸ ಶೆಟ್ಟಿ ಟವರ್ನ ಮೇಲೆ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದಾಳಿಯ ನಂತರ, ಶಂಕಿತರು ಪುಣೆಗೆ ತೆರಳಿದ್ದಾರೆ ಎಂಬ ಮಾಹಿತಿ ಪುಣೆ ಪೊಲೀಸರಿಗೆ ಸಿಕ್ಕಿದೆ.

ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ವಾರ್ಜೆ ಪೊಲೀಸರು ಭಾನುವಾರ ಮಧ್ಯಾಹ್ನ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಪುಣೆಯ ನಿವಾಸಿಗಳಾದ ಅಮನ್ ಆನಂದ್ ಮರೋಟೆ (27), ಆದಿತ್ಯ ಜ್ಞಾನೇಶ್ವರ ಗಾಯಕೆ (19), ಸಿದ್ಧಾರ್ಥ್ ದೀಪಕ್ ಯೆನ್ಪುರೆ (20), ಸಮರ್ಥ ಶಿವಶಂಕರ್ ಪೊಮಾಜಿ (18), ಮತ್ತು ಸ್ವಪ್ನಿಲ್ ಬಂಡು ಸಕತ್ (23) ಎಂದು ಗುರುತಿಸಲಾಗಿದೆ.
ಇವರಲ್ಲಿ ಯಾರಿಗೂ ಯಾವುದೇ ಹಿಂದಿನ ಕ್ರಿಮಿನಲ್ ದಾಖಲೆಗಳಿಲ್ಲ ಮತ್ತು ಅವರು ದಿನಗೂಲಿ ಕೆಲಸ, ಸಣ್ಣ ವ್ಯವಹಾರಗಳು ಹಾಗೂ ಚಾಲನಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಆರೋಪಿಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿರಬಹುದು ಎಂಬ ಪ್ರಾಥಮಿಕ ಶಂಕೆ ಇದೆ. ಶಂಕಿತರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಂಭಾಜಿ ಕದಮ್ ಹೇಳಿದ್ದಾರೆ, ಗುಂಡಿನ ದಾಳಿಯ ಹಿಂದಿನ ಉದ್ದೇಶ ಮತ್ತು ದೊಡ್ಡ ಗ್ಯಾಂಗ್ ಪಿತೂರಿಯಲ್ಲಿ ಭಾಗಿಯಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.

