ಕರ್ನಾಟಕ ಮೂಲದ 8 ಮಂದಿ ಹಕ್ಕಿಪಿಕ್ಕಿ ಬುಡಕಟ್ಟು ಜನರು ಸೆಂಟ್ರಲ್ ಆಫ್ರಿಕಾದಲ್ಲಿ ವೀಸಾ ಅವಧಿ ಮುಕ್ತಾಯದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಅವರಿಗೆ ಬಂಧನ ಭೀತಿ ಎದುರಾಗಿದೆ.
ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಹಕ್ಕಿಪಿಕ್ಕಿ ಬುಡಕಟ್ಟು ಜನರು ಪ್ರತಿವರ್ಷ ಗಿಡಮೂಲಿಕೆಗಳ ವ್ಯಾಪಾರದ ನಿಮಿತ್ತ ವಿವಿಧ ದೇಶಗಳಿಗೆ ತೆರಳುತ್ತಾರೆ. ಅದರಂತೆ ಈ ಬಾರಿ ಸಪ್ಟೆಂಬರ್ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಜನರು ಸೆಂಟ್ರಲ್ ಆಫ್ರಿಕಾಕ್ಕೆ ತೆರಳಿದ್ದರು,

ಇವರ ವೀಸಾ ಕಳೆದ ವರ್ಷ ಡಿಸೆಂಬರ್ 22 ರಂದು ಅವಧಿ ಮುಗಿದ ಕಾರಣ ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ಜೈಲು ಶಿಕ್ಷೆಯ ಬೆದರಿಕೆ ಎದುರಿಸುತ್ತಿದ್ದಾರೆ. ಸ್ಥಳೀಯ ಪೊಲೀಸರು ವೀಸಾ ನವೀಕರಣಕ್ಕೆ ತಲಾ 1.5 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ದಂಡ ಪಾವತಿ ವಿಳಂಬವಾದರೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದಾರೆ ಎನ್ನಲಾಗಿದೆ. ವೀಸಾ ನವೀಕರಣಕ್ಕಾಗಿ ಅವಧಿ ಮುಗಿಯುವ ಒಂದು ವಾರದ ಮೊದಲು ಅವರು ವಲಸೆ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರು.ಆದರೆ ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸಮಯಕ್ಕೆ ಸರಿಯಾಗಿ ನವೀಕರಿಸಲು ವಿಫಲರಾಗಿದ್ದಾರೆ. ಇದೀಗ ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತಮ್ಮನ್ನು ರಕ್ಷಿಸಬೇಕೆಂದು ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ

