ಢಾಕಾ: ಸರ್ಕಾರಿ ವಸತಿ ಯೋಜನೆಯಲ್ಲಿ ಭೂ ಹಂಚಿಕೆ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನ್ಯಾಯಾಲಯವು ಒಟ್ಟು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈ ತೀರ್ಪು ಹಸೀನಾ ಕುಟುಂಬದ ಮೇಲೆ ದೊಡ್ಡ ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.
ಢಾಕಾದ ವಿಶೇಷ ನ್ಯಾಯಾಧೀಶ ನ್ಯಾಯಾಲಯ-4 ರ ನ್ಯಾಯಾಧೀಶರಾದ ರಬಿಯುಲ್ ಅಲಂ ಅವರು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದಾರೆ. ಪುರ್ಬಚಲ್ನ ರಾಜುಕ್ ನ್ಯೂ ಟೌನ್ ಯೋಜನೆಯಡಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಹಸೀನಾ ಅವರ ಮೇಲಿತ್ತು. ಈ ಪ್ರಕರಣಕ್ಕೆ ಸಂಬಧಿಸಿದಂತೆ ಶೇಖ್ ಹಸೀನಾಗೆ ಪ್ರತಿ ಪ್ರಕರಣದಲ್ಲಿ ತಲಾ 5 ವರ್ಷದಂತೆ ಒಟ್ಟು 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆಗೆ 1,00,000 ಟಾಕಾ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 6 ತಿಂಗಳ ಕಾಲ ಜೈಲಿನಲ್ಲಿ ಇರಬೇಕಾಗುತ್ತದೆ.
78 ವರ್ಷದ ಶೇಖ್ ಹಸೀನಾ ಅವರು ಪ್ರಸ್ತುತ ದೇಶದಲ್ಲಿ ಇಲ್ಲದಿದ್ದರೂ, ನ್ಯಾಯಾಲಯವು ನೀಡಿರುವ ಈ ತೀರ್ಪು ಬಾಂಗ್ಲಾದೇಶದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸರ್ಕಾರಿ ಭೂಮಿಯನ್ನು ತಮ್ಮ ಕುಟುಂಬಸ್ಥರಿಗೆ ಅಕ್ರಮವಾಗಿ ಹಂಚಿಕೆ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂಬುದು ಪ್ರಮುಖ ಆರೋಪವಾಗಿತ್ತು.

