ಟಿಬೆಟ್ನ ಬೌದ್ಧ ಧರ್ಮಗುರು, ಜಾಗತಿಕ ಶಾಂತಿ ದೂತ ಎಂದು ಪ್ರಖ್ಯಾತರಾಗಿರುವ ದಲೈಲಾಮಾ ಅವರು ತಮ್ಮ 90ನೇ ವಯಸ್ಸಿನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಂಗೀತ ಪ್ರಶಸ್ತಿಗಳಲ್ಲಿ ಒಂದಾದ ಗ್ರ್ಯಾಮಿ ಪ್ರಶಸ್ತಿಯನ್ನು ಅವರು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ‘ದಿ ರೆಕಾರ್ಡಿಂಗ್ ಅಕಾಡೆಮಿ’ ಆಯೋಜಿಸಿದ್ದ 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ, ದಲೈ ಲಾಮಾ ಅವರಿಗೆ ‘ಬೆಸ್ಟ್ ಆಡಿಯೋ ಬುಕ್ ನರೇಷನ್ ಅಂಡ್ ಸ್ಟೋರಿಟೆಲ್ಲಿಂಗ್ ರೆಕಾರ್ಡಿಂಗ್’ ವಿಭಾಗದಲ್ಲಿ ಈ ಗೌರವ ಲಭಿಸಿದೆ. ಈ ವಿಭಾಗದಲ್ಲಿ ಅವರು ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.

ಈ ಆಲ್ಬಂನಲ್ಲಿ ದಲೈ ಲಾಮಾ ಅವರ ಸ್ವಂತ ಧ್ವನಿಯಲ್ಲಿ ನೀಡಿರುವ ಆಧ್ಯಾತ್ಮಿಕ ಸಂದೇಶಗಳು ಸೇರಿವೆ. ಧ್ಯಾನ, ಅಂತರಂಗದ ಶಾಂತಿ, ಕರುಣೆ, ಆತ್ಮಾವಲೋಕನ ಮತ್ತು ಮಾನವೀಯ ಮೌಲ್ಯಗಳ ಕುರಿತ ಆಳವಾದ ಚಿಂತನೆಗಳು ಇದರಲ್ಲಿ ಒಳಗೊಂಡಿವೆ.
ಇಂದಿನ ವೇಗದ ಜೀವನಶೈಲಿ, ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿಯಲ್ಲಿ ನರಳುತ್ತಿರುವ ಜನರಿಗೆ ಈ ಆಡಿಯೋ ಆಲ್ಬಂ ಒಂದು ಮಾರ್ಗದರ್ಶಕದಂತೆ ಪರಿಣಮಿಸಿದೆ. “ಮನಸ್ಸನ್ನು ಹೇಗೆ ಶಾಂತಗೊಳಿಸಿಕೊಳ್ಳಬೇಕು? ಕರುಣೆಯ ಮಹತ್ವವೇನು “ಸ್ವಯಂ ಅರಿವು ಹೇಗೆ ಸಾಧ್ಯ?” ಎಂಬ ಪ್ರಶ್ನೆಗಳಿಗೆ ದಲೈ ಲಾಮಾ ತಮ್ಮ ಸರಳ, ಸ್ಪಷ್ಟ ಮತ್ತು ಶಾಂತ ಧ್ವನಿಯಲ್ಲಿ ಉತ್ತರ ನೀಡಿದ್ದಾರೆ.
ಈ ವಿಶೇಷ ಆಡಿಯೋ ಪ್ರಾಜೆಕ್ಟ್ಗೆ ಭಾರತದ ಪ್ರಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಮದ್ ಅಲಿ ಖಾನ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವರ ಧ್ಯಾನಾತ್ಮಕ ಸ್ವರಗಳು ದಲೈ ಲಾಮಾ ಅವರ ವಾಣಿ ಮತ್ತು ಸಂದೇಶಗಳಿಗೆ ಇನ್ನಷ್ಟು ಗಂಭೀರತೆ, ಭಾವ ಮತ್ತು ಆಳವನ್ನು ನೀಡಿವೆ.

