ಬೆಂಗಳೂರು : ದುನಿಯಾ ವಿಜಯ್ ,ರಚಿತಾ ರಾಮ್ ಅಭಿನಯದ ಲ್ಯಾಂಡ್ಲಾರ್ಡ್ ಸಿನಿಮಾ ನೋಡಿ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಇತ್ತೀಚೆಗೆ ದುನಿಯಾ ವಿಜಯ್ ಹಾಗೂ ನಿರ್ದೇಶಕ ಜಡೇಶ್ ಕೆ ಹಂಪಿ ಅವರು ಸಿಎಂ ಅವರನ್ನು ಭೇಟಿ ಆದಾಗ ಲ್ಯಾಂಡ್ಲಾರ್ಡ್ ಸಿನಿಮಾನ ನೋಡುವ ಭರವಸೆ ನೀಡಿದ್ದರು. ಆದರೆ ಇಂದು ಚಿತ್ರವನ್ನು ಕಣ್ತುಂಬಿಕೊಳ್ಳುವ ಮೊದಲೇ ಸಿನಿಮಾಗೆ ಎಲ್ಲೆಡೆ ಬರ್ತಿರೋ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ನೋಡಿ, ಚಿತ್ರ ವೀಕ್ಷಿಸುವ ಮೊದಲೇ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಕರ್ನಾಟಕದಲ್ಲಿ ಲ್ಯಾಂಡ್ಲಾರ್ಡ್ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡುವ ಮೂಲಕ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ ಸಾಮಾಜಿಕ ಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯದ ದುನಿಯಾ ವಿಜಯ್ ನಾಯಕತ್ವದ ಲ್ಯಾಂಡ್ಲಾರ್ಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅಂತ ಸ್ವತಃ ಸಿಎಂ ಸಿದ್ದರಾಮಯ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
“ಅಳಿದವರ ಕಥೆಯಲ್ಲ ಅಳಿದು ಉಳಿದವರ ಕಥೆ “ಎನ್ನುವ ವಿಭಿನ್ನ ಟ್ಯಾಗ್ ಲೈನ್ ಹೊಂದಿರುವ ಲ್ಯಾಂಡ್ ಲಾರ್ಡ್ ಸಿನೆಮಾ ಮೌಲ್ಯಯುತ ಸಂದೇಶ ಜನಕ್ಕೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಗೆ ಸಿನಿಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಮಾಜಿಕ ಕಳಕಳಿಯ ಸಿನಿಮಾಗಳನ್ನ ಮಾಡಿದಾಗ, ಅಂಥವ್ರ ಜೊತೆ ನಿಂತು ಬೆನ್ನು ತಟ್ಟುವುದು ಕೂಡ ಸರ್ಕಾರದ ನೈತಿಕ ಹೊಣೆ ಎಂದಿದ್ದಾರೆ.
ಲ್ಯಾಂಡ್ ಲಾರ್ಡ್ ಚಿತ್ರ ಜನವರಿ 23 ರಂದು ಕರ್ನಾಟಕದಾದ್ಯಂತ ಸುಮಾರು 259ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸನ್ನು ಕಾಣುತ್ತಿದೆ.

