ಬೆಂಗಳೂರು : ರಿಲ್ಸ್ ರಾಣಿ ಸುಚಿತ್ರಾ ಜತೆ ಸೇರಿಕೊಂಡು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಉತ್ತರ ಕನ್ನಡ ಮೂಲದ ಸಿದ್ಧಾಪುರದ ಕಮಲಾಕರ್ ಭಟ್ ಅವರ ಹಿನ್ನೆಲೆ ಮತ್ತು ಸಂಪತ್ತಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

ತನ್ನ ಊರಾದ ಸಿದ್ಧಾಪುರದಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದ ಕಮಲಾಕರ್ ಭಟ್ಟ ಜ್ಯೋತಿಷಿ ವೇಷ ತೊಡುವ ಮುನ್ನ ತಮ್ಮ ಊರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವೀಳ್ಯದೆಲೆ ಮತ್ತು ಕಡ್ಲೆಪುರಿ ಮಾರಾಟ ಮಾಡುತ್ತಿದ್ದ, ನಂತರ ಇದ್ದಕ್ಕಿದ್ದಂತೆ 2005ರಲ್ಲಿ ಊರಿನಿಂದ ನಾಪತ್ತೆಯಾದ ಈತ ನಂತರ ಕೇರಳಕ್ಕೆ ತೆರಳಿ ಅಲ್ಲಿ ಜ್ಯೋತಿಷ್ಯ ಹಾಗೂ ವಶೀಕರಣ ವಿದ್ಯೆ ಕಲಿತಿದ್ದನಂತೆ, ಬಳಿಕ ಊರಿಗೆ ಬಂದ ಈತ ಶಾಸ್ತ್ರ ಹೇಳಲು ಪ್ರಾರಂಭಿಸಿದ, ಮೊದಲೇ ಕಡ್ಲೆಪುರಿ ಭಟ್ಟನ ಭವಿಷ್ಯ ತಿಳಿದಿದ್ದ ಊರಿನ ಜನ ಈತನನ್ನು ಮೂಸಿಯೂ ನೋಡಲಿಲ್ಲ, ಇನ್ನು ಇಲ್ಲಿ ಕುಳಿತು ನೋಣ ಹೊಡೆಯುವುದು ವೇಸ್ಟ್ ಎಂದು ಭಾವಿಸಿ ಲಾರಿ ಹತ್ತಿ ಬೆಂಗಳೂರಿಗೆ ಬಂದ ಕಮಲಾಕರ್ ಭಟ್ಟ, ಜ್ಯೋತಿಷಿ ವೇಷ ತೊಟ್ಟು ಜನರಿಗೆ ಮಕ್ಮಲ್ ಟೋಪಿ ಹಾಕಲು ಪ್ರಾರಂಭಿಸಿದ, ಅದೇನೋ ಬೆಂಗಳೂರಿಗೆ ಬಂದ ಮೇಲೆ ಅತನ ಜೀವನದ ದಿಕ್ಕೇ ಬದಲಾಗುತ್ತದೆ.

ಬೆಂಗಳೂರಿನಲ್ಲಿ ಕೆಲವು ಖಾಸಗಿ ಟಿವಿ ಚಾನಲ್ ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಮುಗ್ಧ ಜನರಿಗೆ ಮಂಕುಬೂದಿ ಎರಚಿ ಶಾಸ್ತ್ರವನ್ನು ಹೇಳುತ್ತಾ ತಮ್ಮ ಪ್ರಚಾರವನ್ನು ಮಾಡಿಕೊಂಡ ಕಮಲಾಕರ ಭಟ್, ಅಲ್ಪಾವಧಿಯಲ್ಲೇ ಅಪಾರ ಜನಪ್ರಿಯತೆ ಗಳಿಸಿದ, ಸುಮಾರು 10 ರಿಂದ 15 ವರ್ಷಗಳ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಸಂಪಾದಿಸಿದ, ಎಕರೆಗಟ್ಟಲೆ ಆಸ್ತಿ ಖರೀದಿಸಿದ ಈತ ಬರಿಗೈಯಿಂದ ಕೋಟ್ಯಾಧಿಪತಿಯಾಗಿ ಬೆಳೆದ.

ಅಲ್ಲದೆ ಬೆಂಗಳೂರು ಮಾತ್ರವಲ್ಲದೆ ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ತಮ್ಮ ಕಚೇರಿಗಳನ್ನು ವಿಸ್ತರಿಸಿದ, ಪ್ರತಿ ಕಚೇರಿಯಲ್ಲಿ 10 ರಿಂದ 15 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ತಿಂಗಳಿಗೆ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ತಮ್ಮ ಕಚೇರಿ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕಾಗಿ ಖರ್ಚು ಮಾಡುತ್ತಿದ್ದರು ಎಂದು ತಿಳಿದುಬಂದಿದೆ,
ಬೆಂಗಳೂರು, ಹುಬ್ಬಳ್ಳಿ, ಸಿದ್ದಾಪುರ ಮತ್ತು ಶಿವಮೊಗ್ಗ ಭಾಗದಲ್ಲಿ ಕೆಲವು ಬ್ರೋಕರ್ಗಳನ್ನು ನೇಮಿಸಿಕೊಂಡು, ವಶೀಕರಣ ಮತ್ತು ಜ್ಯೋತಿಷ್ಯ ಸೇವೆಗಳಿಗಾಗಿ ಗ್ರಾಹಕರನ್ನು ಕರೆತರುತ್ತಿದ್ದರು. ಇದರಿಂದ ಬ್ರೋಕರ್ಗಳಿಗೆ ಕಮಿಷನ್ ನೀಡಿ, ತಮ್ಮ ಪ್ರಚಾರವನ್ನು ಹೆಚ್ಚಿಸಿಕೊಂಡಿದ್ದ. ಸುಚಿತ್ರಾ ಕೂಡ ಆರಂಭದಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಬ್ರೋಕರ್ ಆಗಿದ್ದವಳು ಬಳಿಕ ಜ್ಯೋತಿಷಿ ಕಮಲಾಕರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು ಎನ್ನಲಾಗ್ತಿದೆ. ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರಂತೆ. ಅಷ್ಟೇ ಅಲ್ಲದೇ ಸುಚಿತ್ರಾಳನ್ನ ಮದುವೆಯಾಗಲು ಕೂಡಾ ಭಟ್ರು ನಿರ್ಧರಿಸಿದ್ದ ಎನ್ನಲಾಗಿದೆ. ಆದ್ರೆ ಇಬ್ಬರ ಮದುವೆಗೆ ಸುಚಿತ್ರಾ ಗಂಡ ಮಹೇಶ್ ಅಡ್ಡಿಯಾಗಿದ್ದ. ಹೀಗಾಗಿ ಇಬ್ಬರು ಸೇರಿ ಕೊಲೆಗೆ ಸಂಚು ರೂಪಿಸಿ ಈಗ ಕಂಬಿ ಎಣಿಸುತ್ತಿದ್ದಾರೆ.

