ಮಂಗಳೂರು : ಚಿನ್ನಾಸ್ವಾಮಿ ಫಿಲ್ಮಂ ಸಂಸ್ಥೆಯಡಿ ಚಿನ್ನಾಸ್ವಾಮಿ ಎತಿರಾಜ್ ನಿರ್ಮಾಣದ, ಹರಿವರಾಸನಂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ ” ಮಗ್ಗಿ ಪುಸ್ತಕ ” ಕನ್ನಡ ಚಲನಚಿತ್ರ ಇದೇ ಫೆಬ್ರವರಿ 13 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ನಿರ್ದೇಶಕ ಹರಿವರಾಸನಂ ಹೇಳಿದರು.
ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೋನಾ ಕಾಲದಲ್ಲಿ ನಡೆದ. ಕಂಡರೂ ಕಾಣದಂತಹ ವಿಷಯಗಳ ಚಿತ್ರಣದ ಅನುಭವ ನೀಡಲಿದೆ ಮಗ್ಗಿ ಪುಸ್ತಕ. ಮೊಬೈಲ್ನಲ್ಲಿ ಒಳ್ಳೆಯದೂ ಇರತ್ತೆ ಕೆಟ್ಟದ್ದೂ ಇರತ್ತೆ. ಒಳ್ಳೆಯದನ್ನ ಕೂಡಬೇಕು.. ಕೆಟ್ಟದ್ದನ್ನ ಕಳೆಯಬೇಕು. ಜ್ಞಾನ ಗುಣಿಸಬೇಕು.. ಅಜ್ಞಾನವನ್ನ ಭಾಗಿಸಬೇಕು.ಜೀವನ ಅನ್ನೋದೇ ಒಂದು ಮಗ್ಗಿ ಪುಸ್ತಕ ಈ ಚಿತ್ರದ ತಿರುಳು ಎಂದರು.

ಬಿಟ್ಟವರ ಲೆಕ್ಕ ಇಟ್ಟವರ್ಯರು ಅನ್ನೋ ಅಡಿಬರಹ ಇರುವ ಮಗ್ಗಿ ಪುಸ್ತಕ ಚಲನಚಿತ್ರ 4 ಆಯಾಮಗಳನ್ನು ತೆರೆದಿಡುವ ಒಂದು ವಿಭಿನ್ನ ಚಿತ್ರ ಇದಾಗಿದ್ದು ಫೆಬ್ರವರಿ 13 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನೆಮಾ ಇದಾಗಲಿದೆ ಎಂದು ನಿರ್ದೇಶಕ ಹರಿವರಾಸನಂ ಹೇಳಿದರು.
ಸಿನಿಮಾಕ್ಕೆ ಯಶಸ್ ನಾಚಪ್ಪ ಸಂಗೀತ ನಿರ್ದೇಶಿಸಿದ್ದು ಒಟ್ಟು 7 ಹಾಡುಗಳಿದ್ದು ಬಾಹುಬಲಿ ಖ್ಯಾತಿಯ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಒಂದು ಹಾಡನ್ನು ಹಾಡಿದ್ದಾರೆ ಉಳಿದಂತೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಕಂಬದ ರಂಗಯ್ಯ, ಅಂಕಿತಾ ಕುಂಡು, ನವೀನ್ ಸಜ್ಜು , ವೈಕಂ ವಿಜಯಲಕ್ಷ್ಮಿ, ರವೀಂದ್ರ ಸುರಗಾವಿ ಸೇರಿದಂತೆ ಒಟ್ಟು 18 ಮಂದಿ ಗಾಯಕರು ಚಿತ್ರಕ್ಕೆ ಹಾಡುವ ಮೂಲಕ ಕೈ ಜೋಡಿಸಿರೋದು ವಿಶೇಷ.

ಮೈಸೂರು, ಮಂಗಳೂರು, ಎಚ್. ಡಿ. ಕೋಟೆ, ನಂಜನಗೂಡು, ಬೆಂಗಳೂರು ಸುತ್ತಮುತ್ತ ಸುಮಾರು 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಂದಕುಮಾರ್ ಛಾಯಾಗ್ರಹಣ, ಶರಣ್ ಕುಮಾರ್ ಗಜೇಂದ್ರಗಡ, ಗುರುನಾಥ ಬೋರಗಿ ಸಾಹಿತ್ಯ, ಶಿವಕುಮಾರ್ ಎಂ.ಸಂಕಲನ, ರಸೂಲ್ ನದಾಫ್ ಕಲಾ ನಿರ್ದೇಶನ ಮಗ್ಗಿ ಪುಸ್ತಕ ಸಿನಿಮಾಕ್ಕಿದೆ.
ತಾರಾಗಣದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಗಡ್ಡ ಪ್ರವೀಣ ಖ್ಯಾತಿಯ ರಂಜನ್, ಶ್ರೀರಕ್ಷಾ ಗೌಡ,ಮೇಘನಾ, ರಾನ್ವಿ ಶೇಖರ್,ರಂಗಾಯಣ ರಘು, ಶೋಭರಾಜ್, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ಬಿರಾದರ್, ಚಂದ್ರಪ್ರಭ, ಮೂಗು ಸುರೇಶ್, ಶ್ರೀನಿವಾಸ್ ಗೌಡ, ಗೋಪಿ ಮುಂತಾದವರು ನಟಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ನಟ ರಂಜನ್, ಶೋಭರಾಜ್ ಬೊಳ್ಳಾರ್, ನಿರ್ಮಾಪಕ ಚಿನ್ನಸ್ವಾಮಿ ಎತಿರಾಜ್ ,ರಾನ್ವಿ ಶೇಖರ್ ಉಪಸ್ಥಿತರಿದ್ದರು.



