ವಡೋದರಾ : ಗುಜರಾತ್ನ ವಡೋದರಾ ಜಿಲ್ಲೆಯ ಮಲ್ಸರ್ ಗ್ರಾಮದ ಒಂದು ವರ್ಷದ ಬಾಲಕ ಕಳೆದ ಆರು ವಾರಗಳಿಂದ ತೀವ್ರ ಜ್ವರ ಮತ್ತು ನಿರಂತರ ಕೆಮ್ಮಿನಿಂದ ಬಳಲುತ್ತಿದ್ದು ಹಲವಾರು ಆಸ್ಪತ್ರೆಗಳಲ್ಲಿ ಪರೀಕ್ಷಿಸಲಾಗಿತ್ತು, ಆದರೆ ಯಾವುದೇ ಚಿಕಿತ್ಸೆಗೆ ಸ್ವಂದಿಸದ ಕಾರಣ ಮಗುವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಯಿತು, ಆರಂಭದಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ನ್ಯುಮೋನಿಯಾ ಎಂದು ತಪ್ಪಾಗಿ ನಿರ್ಣಯಿಸಿ ಚಿಕಿತ್ಸೆ ನೀಡಲಾಯಿತು.

ಚಿಕಿತ್ಸೆಗಳು ವಿಫಲವಾದಾಗ, ಕುಟುಂಬವು ಮಗುವನ್ನು ಗೋತ್ರಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿನ ಇಎನ್ಟಿ ತಜ್ಞರು ಪರೀಕ್ಷೆ ನಡೆಸಿದರು ಮತ್ತು ಎಕ್ಸ್ ರೇ ಮಾಡಲಾಯಿತು, ಎಕ್ಸ್-ರೇ ಯಲ್ಲಿ ಶ್ವಾಸನಾಳದಲ್ಲಿ ಸಿಲುಕಿಕೊಂಡಿರುವ ಒಂದು ವಸ್ತುವನ್ನು ಪತ್ತೆಹಚ್ಚಿದರು ಅದನ್ನು ಕೂಲಂಕಷವಾಗಿ ಪರೀಕ್ಷಿಸಿದಾಗ ಸಣ್ಣ ಲೋಹದ ತುಂಡಿನ ಹಾಗೇ ಗೋಚರಿಸಿತು. ಸಂಪೂರ್ಣ ಪರೀಕ್ಷೆ ಮಾಡಿದ ನಂತರ,ಮಗುವಿನ ಶ್ವಾಸಕೋಶದಲ್ಲಿ ಒಂದು ಸೆಂಟಿಮೀಟರ್ ಉದ್ದದ ಎಲ್ಇಡಿ ಬಲ್ಬ್ ಇರುವುದು ಕಂಡುಬಂದಿತು.

ಕೂಡಲೇ ಡಾ.ಹಿರೇನ್ ಸೋನಿ ಮತ್ತು ವೈದ್ಯರ ತಂಡ ಆಧುನಿಕ ಉಪಕರಣದ ಸಹಾಯದಿಂದ ಆಪ್ಟಿಕಲ್ ಬ್ರಾಂಕೋಸ್ಕೋಪಿ ಮಾಡಿ ಶ್ವಾಸನಾಳದ ಕೊಳವೆಯೊಳಗೆ ಆಳವಾಗಿ ಸಿಲುಕಿಕೊಂಡಿದ್ದ ಒಂದು ಸೆಂಟಿಮೀಟರ್ ಉದ್ದದ ಬಲ್ಬ್ ನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆದು ಹಾಕಲಾಯಿತು ವಿಳಂಬದಿಂದಾಗಿ ಬಲ್ಬಿನ ಮೇಲೆ ಚರ್ಮ ಬೆಳೆದಿತ್ತು, ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಸ್ಥಿತಿ ಸುಧಾರಿಸಿದೆ ಮತ್ತು ಅವನು ಪ್ರಸ್ತುತ ಆರೋಗ್ಯವಾಗಿದ್ದಾನೆ ಎಂದು ಡಾ. ಹಿರೇನ್ ಸೋನಿ ಹೇಳಿದರು.



