ಮಂಗಳೂರು : ಶಕ್ತಿನಗರದ ಪದವು ಫ್ರೆಂಡ್ಸ್ ಕ್ಲಬ್ ತನ್ನ ಸ್ವರ್ಣ ವಾರ್ಷಿಕೋತ್ಸವವನ್ನು ಫೆಬ್ರವರಿ 13ರಿಂದ 17ರವರೆಗೆ ಶಕ್ತಿನಗರ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ ಎಂದು ಕ್ಲಬ್ನ ಅಧ್ಯಕ್ಷ ಕುಶಾಲ್ ಕುಮಾರ್ ಕೆ.ತಿಳಿಸಿದರು.

ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಪದವು ಫ್ರೆಂಡ್ಸ್ ಕ್ಲಬ್, ಶಕ್ತಿನಗರ ಪರಿಸರದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ.
ಸ್ಥಳೀಯ ಸರಕಾರಿ ಶಾಲೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಂಸ್ಥೆ, ಪ್ರತಿವರ್ಷ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದರೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ. ಶಕ್ತಿನಗರದಲ್ಲಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸಂಸ್ಥೆಯು ನಿರಂತರ ಪ್ರಯತ್ನ ಹಾಗೂ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಸ್ವರ್ಣ ಸಂಭ್ರಮದ ಅಂಗವಾಗಿ ಕಳೆದ ಏಪ್ರಿಲ್ನಿಂದ ವರ್ಷಪೂರ್ತಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಗಣಹೋಮ, ಸತ್ಯನಾರಾಯಣ ಪೂಜೆ, ಹರಿಕಥಾ, ಕ್ರೀಡಾ ಸ್ಪರ್ಧೆಗಳು, ಕ್ರಿಕೆಟ್ ಪಂದ್ಯಾಟ, ಪುಡ್ ಫೆಸ್ಟಿವಲ್ ಸೇರಿದಂತೆ ಅನೇಕ ಧಾರ್ಮಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುವರ್ಣ ಮಹೋತ್ಸವದ ಪ್ರಯುಕ್ತ ಫೆ.13 ರಿಂದ ಫೆ.17 ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ದಿನಾಂಕ 13ರಂದು ಸ್ಥಳೀಯ ಸರಕಾರಿ ಶಾಲೆ/ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ಜರುಗಲಿದೆ. ಶಿಕ್ಷಣ ಇಲಾಖೆಯ ಅನೇಕ ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ 600ಕ್ಕೂ ಹೆಚ್ಚು ಬಹುಮಾನಗಳನ್ನು ವಿತರಿಸಲಾಗುವುದು.ಅಲ್ಲದೆ ತಾಲೂಕು/ಜಿಲ್ಲಾ ಮಟ್ಟದಲ್ಲಿ ಮಿಂಚಿರುವ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರವನ್ನು ನೀಡಲಾಗುವುದು
ದಿನಾಂಕ 14ರಂದು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಸುಂದರ್ ಅಂಚನ್ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಹಿರಿಯ ಕಲಾವಿದೆ ಶ್ರೀಮತಿ ಸರೋಜಿನಿ ಶೆಟ್ಟಿಯವರಿಗೆ, ಹಾಸ್ಯ ಚಕ್ರವರ್ತಿ ಬಿರುದಾಂಕಿತ ದಿ। ಮಾಧವ ಕೆ. ಶಕ್ತಿನಗರ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಖ್ಯಾತ ರಂಗ ಸಂಘಟಕ ಕಿಶೋರ್ ಡಿ. ಶೆಟ್ಟಿಯವರಿಗೆ “ರಂಗ ಶಕ್ತಿ”, ಕು! ಶೋಭಾ ಶಕ್ತಿನಗರ ಇವರಿಗೆ “ಕಲಾಸಿರಿ ಶಕ್ತಿ” ಬಿರುದು ನೀಡಿ ಗೌರವಿಸಲಾಗುವುದು.ದಿ|ನಾಗವೇಣಿ ಟೀಚರ್ರವರನ್ನು ಸಂಸ್ಕರಿಸಿ ಅವರ ಕುಟುಂಬವನ್ನು ಅಭಿನಂದಿಸಲಾಗುವುದು. ಖ್ಯಾತ ಹಾಸ್ಯ ಕಲಾವಿದ ಶ್ರೀ ಅರವಿಂದ ಬೋಳಾರ್ರವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಮನರಂಜನೆಯ ಅಂಗವಾಗಿ ಪದವು ಅಂಗನವಾಡಿ ಪುಟಾಣಿಗಳ ಮತ್ತು ಸ್ಥಳೀಯ ಪ್ರತಿಭೆಗಳಿಂದ ವಿವಿಧ ಕಾರ್ಯಕ್ರಮಗಳು ಹಾಗೂ ಲಕುಮಿ ತಂಡದಿಂದ “ಆಂಟಿ ಬೊಕ್ಕ ಅಂಕಲ್” ಎಂಬ ತುಳು ಹಾಸ್ಯಮಯ ನಾಟಕ ಜರುಗಲಿದೆ.

ದಿನಾಂಕ 15ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ್ ಆಳ್ವರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದುಬೈಯ ಖ್ಯಾತ ಉದ್ಯಮಿ, ಕಲಾಪೋಷಕ ಹಾಗೂ ಸಮಾಜ ಸೇವಕ ಶ್ರೀ ಹರೀಶ್ ಶೇರಿಗಾರ್ ದಂಪತಿಗಳನ್ನು ಸನ್ಮಾನಿಸಲಾಗುವುದು. ಅಲ್ಲದೆ ದೈಹಿಕ ಶಿಕ್ಷಣ ನಿರ್ದೆಶಕಿಯಾಗಿ 35ಕ್ಕೂ ಹೆಚ್ಚು ವರುಷ ಸೇವೆ ಸಲ್ಲಿರುವ ಶಕ್ತಿನಗರ ಸರಕಾರಿ ಪ್ರೌಢ ಶಾಲೆಯ ಶ್ರೀಮತಿ ಸಿಲ್ವಿಯಾ ಎ.ಆರ್. ಕ್ಯಾಸ್ತಲಿನೊರವರನ್ನುಸನ್ಮಾನಿಸಲಾಗುವುದು. ಮನರಂಜನೆಯ ಅಂಗವಾಗಿ ದುಬೈನ ಶ್ರೀ ಹರೀಶ್ ಶೇರಿಗಾರ್ ಪ್ರಾಯೋಜಕತ್ವದಲ್ಲಿ ರಾಜ್ಯದ ಖ್ಯಾತ ಕಲಾವಿದರ ಸಂಗಮದಲ್ಲಿ ಪಿ.ಎಫ್.ಸಿ. ಸ್ವರ್ಣ ಸಂಗೀತ ಸಂಭ್ರಮ ಎಂಬ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 16ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಶ್ರೀ ಮಾಲಾಡಿ ಅಜಿತ್ ಕುಮಾರ್ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಖ್ಯಾತ ನಾಟಕಕಾರ, ನಿರ್ದೇಶಕ ಹಾಸ್ಯ ಕಲಾವಿದ ಶ್ರೀ ದೇವದಾಸ್ ಕಾಪಿಕಾಡ್ರವರಿಗೆ “ತೆಲಿಕೆದ ಐಸಿರಿ” ಬಿರುದು ಮತ್ತು ಖ್ಯಾತ ನಾಟಕಕಾರ,ನಿರ್ದೇಶಕ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ಬೈಲ್ರವರಿಗೆ “ಕಲಾ ಶಕ್ತಿ” ಬಿರುದು ನೀಡಿ ಗೌರವಿಸಲಾಗುವುದು. ಪದವು ಫ್ರೆಂಡ್ಸ್ ಕ್ಲಬ್ ಸ್ವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಶ್ರೀ ಜಾನ್ಸನ್ರವರನ್ನು ಅಭಿನಂದಿಸಿ ಗೌರವಿಸಲಾಗುವುದು. ಮನರಂಜನೆಯ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಕಾರ್ಯಕ್ರಮಗಳು ಹಾಗೂ ವಿಧಾತ್ರಿ ತಂಡದಿಂದ “ಜೈ ಹನುಮಾನ್” ಎಂಬ ತುಳು ಭಕ್ತಿಪ್ರಧಾನ ನಾಟಕ ಜರುಗಲಿದೆ.

ದಿನಾಂಕ 17ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಉಮೇಶ ಪಂಬದರವರನ್ನು ಸನ್ಮಾನಿಸಲಾಗುವುದು. ಸಂಸ್ಥೆಗೆ ಕಟ್ಟಡ ಕಟ್ಟಲು ಸ್ಥಳದಾನ ನೀಡಿರುವ ದಿ| ತಿಮ್ಮಪ್ಪ ಕುಟುಂಬದ ಸದಸ್ಯರನ್ನು ಗೌರವಿಸಲಾಗುವುದು ಅಲ್ಲದೆ ಸಂಸ್ಥೆಯ ಪೋಷಕರಾದ ಪೋಷಕರಾದ ಶ್ರೀ ದಿವಾಣ ಗೋವಿಂದ ಭಟ್ರವರನ್ನು ಗೌರವಿಸಲಾಗುವುದು. ಮನರಂಜನೆಯ “ಶ್ವೇತಕುಮಾರ ಚರಿತ್ರೆ – ವೀರ ಅಭಿಮನ್ಯು” ಎಂಬ ಯಕ್ಷಗಾನ
ಅಂಗವಾಗಿ ಹನುಮಗಿರಿ ಮೇಳದವರಿಂದ
ಪ್ರದರ್ಶನ ನಡೆಯಲಿರುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಜಾನ್ಸನ್, ಕಾರ್ಯದರ್ಶಿ ರಾಮಕೃಷ್ಣ ಭಟ್, ಸದಸ್ಯರಾದ ರವಿಚಂದ್ರ , ರವೀಂದ್ರ ರೈ, ಪ್ರಸಾದ್ ಟಿ. ಹಾಗೂ ಹರೀಶ್ ಕುಮಾರ್ ಜೋಗಿ , ಉಪಸ್ಥಿತರಿದ್ದರು

