ಮಾಸ್ಕೋ: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸಾಪ್ ಅನ್ನು ರಷ್ಯಾ ಸರ್ಕಾರ ಸಂಪೂರ್ಣವಾಗಿ ನಿರ್ಬಂಧಿಸಲು ನಿರ್ಧರಿಸಿದೆ. ಈ ಬೆಳವಣಿಗೆಯನ್ನು ವಾಟ್ಸಾಪ್ನ ಮಾತೃ ಸಂಸ್ಥೆಯಾದ ‘ಮೆಟಾ’ ದೃಢಪಡಿಸಿದ್ದು, ಇದು ರಷ್ಯಾದ 10 ಕೋಟಿಗೂ ಅಧಿಕ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದೆ.
ಉಕ್ರೇನ್ ಜೊತೆಗಿನ ಯುದ್ಧ ಆರಂಭವಾದಾಗಿನಿಂದ ರಷ್ಯಾ ಸರ್ಕಾರವು ದೇಶದ ಮಾಹಿತಿ ವ್ಯವಸ್ಥೆಯ ಮೇಲೆ ಬಿಗಿ ನಿಯಂತ್ರಣ ಸಾಧಿಸಲು ಮುಂದಾಗಿದೆ. ಪಾಶ್ಚಿಮಾತ್ಯ ದೇಶಗಳ ಪ್ರಭಾವವನ್ನು ತಗ್ಗಿಸಲು ಮತ್ತು ರಷ್ಯಾದ ಆಂತರಿಕ ಮಾಹಿತಿಗಳು ಸೋರಿಕೆಯಾಗದಂತೆ ತಡೆಯಲು ರಷ್ಯಾ ಈಗಾಗಲೇ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಗಳನ್ನು ನಿರ್ಬಂಧಿಸಿದೆ. ಈಗ ಆ ಸಾಲಿಗೆ ವಾಟ್ಸಾಪ್ ಕೂಡ ಸೇರ್ಪಡೆಯಾಗುತ್ತಿದೆ.

ರಷ್ಯಾ ಸರ್ಕಾರವು ತನ್ನದೇ ಆದ ಸ್ಥಳೀಯ ಆ್ಯಪ್ಗಳನ್ನು ಉತ್ತೇಜಿಸಲು ಮತ್ತು ಅಮೆರಿಕ ಮೂಲದ ಕಂಪನಿಗಳ ಮೇಲಿನ ಅವಲಂಬನೆಯನ್ನು ತಪ್ಪಿಸಲು ಈ ಪ್ರಯತ್ನ ಮಾಡುತ್ತಿದೆ. ಆದರೆ, ವಿಶ್ವದಾದ್ಯಂತ ಸುರಕ್ಷಿತ ಮತ್ತು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮೆಸೇಜಿಂಗ್ಗೆ ಹೆಸರಾಗಿರುವ ವಾಟ್ಸಾಪ್ ನಿಷೇಧದಿಂದ ರಷ್ಯಾದ ನಾಗರಿಕರು ಈಗ ಪರ್ಯಾಯ ಮಾರ್ಗಗಳನ್ನು ಹುಡುಕುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ರಷ್ಯಾದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮೆಟಾ ಸಂಸ್ಥೆ, ವಾಟ್ಸಾಪ್ ನಿರ್ಬಂಧಿಸುವುದರಿಂದ ರಷ್ಯಾ ಡಿಜಿಟಲ್ ಜಗತ್ತಿನಲ್ಲಿ ಹಿಂದಕ್ಕೆ ಸಾಗುತ್ತಿದೆ. ಇದರಿಂದ ಜನರ ಗೌಪ್ಯತೆ ಮತ್ತು ಆನ್ಲೈನ್ ಸುರಕ್ಷತೆಗೆ ದೊಡ್ಡ ಧಕ್ಕೆ ಉಂಟಾಗಲಿದೆ. ಜನರು ಮುಕ್ತವಾಗಿ ಸಂವಹನ ನಡೆಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಹೇಳಿಕೊಂಡಿದೆ. ರಷ್ಯಾದಲ್ಲಿ ಸುಮಾರು 100 ಮಿಲಿಯನ್ (10 ಕೋಟಿ) ಜನ ವಾಟ್ಸಾಪ್ ಬಳಸುತ್ತಿದ್ದು, ಇದು ಅವರ ದೈನಂದಿನ ಜೀವನ ಮತ್ತು ವ್ಯವಹಾರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.


