ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಕಾರು ಗ್ರಾಮದ ಇತಿಹಾಸ ಪ್ರಸಿದ್ಧ ಶರವೂರಿನ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಮಾರ್ಚ್ 25 ರಿಂದ ಏಪ್ರಿಲ್ 2ರವರೆಗೆ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿವರ್ಯರ ಮಾರ್ಗದರ್ಶನದಲ್ಲಿ,ಡಾ|ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರ ಗೌರವಾಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಹೇಮಂತ ರೈ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಪ್ರಸ್ತುತ ವಿನೂತನವಾಗಿ ಪ್ರಶ್ನಾಚಿಂತನೆಯನ್ನು ನಡೆಸಿ, ಸಮಗ್ರ ಜೀರ್ಣೋದ್ಧಾರದ ಸಂಕಲ್ಪವನ್ನು ಕೈಗೊಳ್ಳಲಾಗಿದೆ. ಅಂದಾಜು ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾದ ತಾಮ್ರದ ಛಾವಣಿ ಹೊಂದಿದ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪ, ಸುತ್ತುಪೌಳಿ, ತೀರ್ಥಬಾವಿ, ರಾಜಗೋಪುರ, ಮಹಾದ್ವಾರ, ಬ್ರಹ್ಮರಥ, ಚಂದ್ರಮಂಡಲ ರಥ, ಏಕಶಿಲಾ ಧ್ವಜಸ್ತಂಭ, ಅಂಗಣದ ಶಿಲೆಗಲ್ಲಿನ ಹಾಸು, ಪರಿವಾರ ದೈವ ದೇವರುಗಳ ವಿವಿಧ ಪ್ರಕಲ್ಪಗಳನ್ನು ಪುನರ್ ನಿರ್ಮಾಣ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬ್ರಹ್ಮಕಲಶೋತ್ಸವವು ದೇವಾಲಯದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕ್ರಾಯಕ್ರಮಗಳೊಂದಿಗೆ ನಡೆಯಲಿದೆ, ಜಾಗತಿಕವಾಗಿ ಭಕ್ತ ಮಹಾಜನರ ನೆರವಿನ ಮಹಾಪೂರ ಶ್ರೀ ಕ್ಷೇತ್ರದ ಕಡೆಗೆ ಹರಿದು ಬರುತ್ತಿದೆ. ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಭಕ್ತ ಜನರ ಸೌಲಭ್ಯಕ್ಕಾಗಿ ಬೇಕಾದ ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು, ಈ ಸಂಧರ್ಭದಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು


ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ , ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ , ಪ್ರಧಾನ ಆರ್ಚಕರಾದ ರಾಘವೇಂದ್ರ ಪ್ರಸಾದ್ ಭಟ್ ತೋಟಂತಿಲ ,ಸಮಿತಿಯ ಪ್ರಮುಖರಾದ ರಾಧಾಕೃಷ್ಣ ರೈ ಪರಾರಿ ಗುತ್ತು ,ಎನ್ ಮುತ್ತಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು .

