ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು, ಜೋ ಸೈಮನ್ ಅವರು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾಗಲೇ ಹೃದಯಾಘಾತವಾಗಿದ್ದು ತಕ್ಷಣವೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಾಹಸ, ಆಕ್ಷನ್ ಮತ್ತು ಭಾವನಾತ್ಮಕ ಮನರಂಜನೆಯನ್ನು ಸಮತೋಲನವಾಗಿ ಬೆರೆಸಿ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿದ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಜೋ ಸೈಮನ್ 1970ರ ದಶಕದಲ್ಲಿ ಸಿನಿರಂಗ ಪ್ರವೇಶಿಸಿದರು,1977ರಲ್ಲಿ ಬಿಡುಗಡೆಯಾದ ಒಂದು ಪ್ರೇಮದ ಕಥೆ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು.

ಹಲವು ದಶಕಗಳ ಕಾಲ ಸಿನಿರಂಗದಲ್ಲಿ ಸಕ್ರಿಯರಾಗಿದ್ದ ಅವರು ನಿರ್ದೇಶಕ, ಕಥೆಗಾರ ಮತ್ತು ನಟರಾಗಿ, ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡರು.1982ರಲ್ಲಿ ಬಿಡುಗಡೆಯಾದ. ವಿಷ್ಣುವರ್ಧನ್ ಅಭಿನಯಿಸಿದ ಸಾಹಸ ಸಿಂಹ ಸಿನಿಮಾ, ಜೋ ಸೈಮನ್ ಅವರ ಕೆರಿಯರ್ನಲ್ಲಿ ಮಹತ್ತರ ತಿರುವು ನೀಡಿತ್ತು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿನಯಿಸಿದ ಪಾತ್ರದ ಸಾಹಸಮಯ ವ್ಯಕ್ತಿತ್ವ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿತು. ಈ ಚಿತ್ರದ ಯಶಸ್ಸಿನ ಬಳಿಕ ವಿಷ್ಣುವರ್ಧನ್ ಅವರಿಗೆ “ಸಾಹಸ ಸಿಂಹ” ಎಂಬ ಬಿರುದು ಅಂಟಿಕೊಂಡು ಜನಪ್ರಿಯವಾಯಿತು, ವಿಶೇಷವಾಗಿ ವಿಷ್ಣುವರ್ಧನ್ ಅವರಿಗೆ “ಸಾಹಸ ಸಿಂಹ” ಎಂಬ ಬಿರುದನ್ನು ಜನಪ್ರಿಯಗೊಳಿಸಿದ ನಿರ್ದೇಶಕರಾಗಿ ಜೋ ಸೈಮನ್ ಹೆಸರುವಾಸಿಯಾಗಿದ್ದರು.

ಹಾಂಕಾಂಗ್ನಲ್ಲಿ ಏಜೆಂಟ್ ಅಮರ್, ಟೈಂ ಬಾಂಬ್, ಮಿಸ್ಟರ್ ವಾಸು, ಸ್ನೇಹದ ಕಡಲಲ್ಲಿ, ರವಿವರ್ಮ, ದಾದಾ ಗಿರಿ, ಪಯಣ, ಕೃಷ್ಣಾರ್ಜುನ, ಸಿಂಹ ಜೋಡಿ,ನನ್ನ ರೋಷ ನೂರು ವರುಷ, ಮಹಾ ಪ್ರಚಂಡರು, ಮುಂತಾದ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ.
ನಿರ್ದೇಶಕ, ನಟ ಹಾಗೂ ಗೀತರಚನೆಕಾರರಾಗಿ ಅವರು ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸೇವೆ ಸಲ್ಲಿಸಿ, ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದರು. ಜೋ ಸೈಮನ್ ಅವರ ಸಿನಿ ಪಯಣವು ಕೇವಲ ಹಿಟ್ ಸಿನಿಮಾಗಳ ಪಟ್ಟಿಯಲ್ಲ, ಅದು ಕನ್ನಡ ಚಿತ್ರರಂಗದ ಒಂದು ಚಿನ್ನದ ಅಧ್ಯಾಯ. ಸಾಹಸಮಯ ಕಥೆಗಳು, ಮನರಂಜನಾ ಮೌಲ್ಯ ಮತ್ತು ತಾಂತ್ರಿಕ ವೈಶಿಷ್ಟ್ಯತೆಗಳನ್ನು ಒಟ್ಟುಗೂಡಿಸಿದ ನಿರ್ದೇಶಕರಾಗಿ ಅವರು ಗುರುತಿಸಿ ಕೊಂಡಿದ್ದಾರೆ.


