ನವದೆಹಲಿ : ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿಷಯ ದೀರ್ಘಕಾಲದ ಬಳಿಕ ಮತ್ತೆ ಚರ್ಚೆಗೆ ಬಂದಿದೆ. 2018 ರ ಸೆಪ್ಟೆಂಬರ್ನಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.
9 ನ್ಯಾಯಮೂರ್ತಿಗಳ ಪ್ರತ್ಯೇಕ ಪೀಠವು ಏಪ್ರಿಲ್ 7ರಿಂದ ವಿಚಾರಣೆ ಆರಂಭಿಸಿ ಏಪ್ರಿಲ್ 22ರಂದು ಮುಕ್ತಾಯ ಗೊಳಿಸುವ ಉದ್ದೇಶಿಸಲಾಗಿದೆ. ಸುಪ್ರೀಂಕೋರ್ಟ್ ಸಿಜೆಐ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠ ಈ ತೀರ್ಮಾನ ಪ್ರಕಟಿಸಿದ್ದು, 9 ನ್ಯಾಯಾಧೀಶರ ಪೀಠ ಸಂಯೋಜನೆಯನ್ನು ಸಿಜೆಐ ಆಡಳಿತಾತ್ಮಕ ಆದೇಶದ ಮೂಲಕ ಪ್ರತ್ಯೇಕವಾಗಿ ಘೋಷಿಸಲಾಗುತ್ತದೆ.

ಮಹಿಳೆಯರ ಪ್ರವೇಶಕ್ಕೆ ಬೆಂಬಲ ನೀಡುವವರು ಏಪ್ರಿಲ್ 7ರಿಂದ 9ರವರೆಗೆ ವಾದ ಮಂಡಿಸಲಿದ್ದು, ವಿರೋಧಿಸುವವರು ಏಪ್ರಿಲ್ 14ರಿಂದ 16ರವರೆಗೆ ತಮ್ಮ ವಾದಗಳನ್ನು ಮಂಡಿಸಲಿದ್ದಾರೆ. ಏಪ್ರಿಲ್ 21ರಂದು ಮರುಪ್ರತಿಕ್ರಿಯೆಗಳು ಸಲ್ಲಿಕೆಯಾಗಲಿದ್ದು, 22ರಂದು ವಿಚಾರಣೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

2018ರಲ್ಲಿ ಐದು ನ್ಯಾಯಾಧೀಶರ ಪೀಠ ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆದರೆ ಇವರಲ್ಲಿ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ವಿರೋಧ ವ್ಯಕ್ತಪಡಿಸಿದ್ದರು. ತೀರ್ಪಿನ ನಂತರ ಕೇರಳದಲ್ಲಿ ಹಲವು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ತೀರ್ಪು ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಲಾಗಿತ್ತು.

ಈ ಪ್ರಕರಣದೊಂದಿಗೆ ದರ್ಗಾ ಹಾಗೂ ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರ ಪ್ರವೇಶ, ಪಾರ್ಸಿ ಮಹಿಳೆಯರ ಅಗ್ನಿ ದೇವಾಲಯ ಪ್ರವೇಶ, ದಾವೂದಿ ಬೊಹ್ರಾ ಸಮುದಾಯದಲ್ಲಿ ಬಹಿಷ್ಕಾರ ಪದ್ಧತಿ ಮತ್ತು ಸ್ತ್ರೀ ಜನನಾಂಗ ಛೇದನ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳ ಸಂವಿಧಾನಿಕ ಮಾನ್ಯತೆ ಕುರಿತ ಅರ್ಜಿಗಳನ್ನೂ ಪಟ್ಟಿ ಮಾಡಲಾಗಿದೆ.
ಶಬರಿಮಲೆ ಪ್ರವೇಶ ವಿಚಾರದಲ್ಲಿ ಕೇರಳ ಸರ್ಕಾರ ಮಹಿಳೆಯರ ಪ್ರವೇಶಕ್ಕೆ ಬೆಂಬಲ ನೀಡಿದ್ದರೆ, ಕೇಂದ್ರ ಸರ್ಕಾರ ನಿರ್ಬಂಧದ ಪರ ನಿಲುವು ಹೊಂದಿದೆ. ಈ ವಿಚಾರಣೆ ಮತ್ತೆ ರಾಜಕೀಯ ಹಾಗೂ ಧಾರ್ಮಿಕ ಚರ್ಚೆಗೆ ಕಾರಣವಾಗಲಿದೆ ಎಂಬ ನಿರೀಕ್ಷೆ ಇದೆ.


