ಬೆಂಗಳೂರು : ಕಳೆದ ವಾರ ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಸ್ಟಾರ್ ನಿರ್ದೇಶಕರ ಮೇಲೆ ನಾಲಿಗೆ ಹರಿಬಿಟ್ಟು ಬಹುದೊಡ್ಡ ವಿವಾದಕ್ಕೆ ಕಾರಣರಾಗಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇಂದು ಕರ್ನಾಟಕ ಫಿಲ್ಮ್ ಚೇಂಬರ್ ನಲ್ಲಿ ಎಲ್ಲರ ಎದುರು ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿ ಆಗಿದ್ದು, ಎಮೋಷನಲ್ ಆಗಿ ಕೆಲವು ವಿಚಾರ ಮಾತನಾಡಿದ್ದೇನೆ, ತಪ್ಪಿನ ಅರಿವಾಗಿ, ಇನ್ಮುಂದೆ ತಮ್ಮ ನಾಲಿಗೆಯನ್ನ ಹತೋಟಿಯಲ್ಲಿ ಇಟ್ಟಿಕೊಳ್ಳೋ ಭರವಸೆಯನ್ನು ನಿರ್ಮಾಪಕ ಶ್ರೀನಿವಾಸ್ ನೀಡಿದ್ದಾರೆ.

ಫೆಬ್ರವರಿ 5 ರಂದು ‘ಕಾಟನ್ ಪೇಟೆ ಗೇಟ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಜೋಗಿ ಪ್ರೇಮ್, ಎ ಪಿ ಅರ್ಜುನ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜ್ ಸೇರಿದಂತೆ ಹಲವು ನಟರ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ಅಸಮಾಧಾನ ಹೊರಹಾಕಿದರು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚಿತ್ರರಂಗದೊಳಗೆ ತೀವ್ರ ಪ್ರತಿಕ್ರಿಯೆ ಹುಟ್ಟಿಸಿತು. ಮತ್ತು ಚಿತ್ರರಂಗದ ಗೌರವಕ್ಕೆ ಧಕ್ಕೆ ತಂದುಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತು. ಹೀಗಾಗಿ ನಿರ್ದೇಶಕ ಪ್ರೇಮ್ ಹಾಗು ಎ.ಪಿ ಅರ್ಜುನ್ ಫಿಲಂ ಚೇಂಬರ್ ನಲ್ಲಿ ಶ್ರೀನಿವಾಸ್ ವಿರುದ್ಧ ದೂರು ದಾಖಲಿಸಿದ್ದರು.

ವಿಷಯ ತೀವ್ರವಾಗುತ್ತಿದ್ದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಗಮನ ಹರಿಸಿತು. ಈ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರು ಕನಕಪುರ ಶ್ರೀನಿವಾಸ್ ಅವರಿಗೆ ಸ್ಪಷ್ಟಿಕರಣ ನೀಡಲು ಫಿಲ್ಮ್ ಚೇಂಬರ್ ಗೆ ಕರೆಸಿಕೊಂಡಿದ್ದರು. ಅಧ್ಯಕ್ಷರ ನೇತೃತ್ವದಲ್ಲಿ ಇಂದು ಒಂದೂವರೆ ಗಂಟೆ ಚರ್ಚೆ ನಡೆದಿದ್ದು, ಚರ್ಚೆಯ ಬಳಿಕ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಕನಕಪುರ ಶ್ರೀನಿವಾಸ್ ಭಾವೋದ್ರಿಕ್ತವಾಗಿ ಕ್ಷಮೆ ಯಾಚಿಸಿದರು. ತಾನು ಒತ್ತಡದಲ್ಲಿ, ದುಃಖದಲ್ಲಿ ಹೇಳಿದ ಮಾತಾಗಿದ್ದು. ಏಳು ಕೋಟಿ ಕನ್ನಡಿಗರಿಗೆ ಕ್ಷಮೆ ಕೇಳುತ್ತೇನೆ ಎಂದರು. ನಂತರ ಅಧ್ಯಕ್ಷೆ ಜಯಮಾಲ ಅವರು ಮಾತನಾಡಿ ಶ್ರೀನಿವಾಸ್ ಅವರಿಗೆ ತಾನು ಮಾತನಾಡಿದ್ದು ತಪ್ಪು ಅನ್ನೋದು ಅವರಿಗೆ ಅರಿವಾಗಿದೆ, ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಹೀಗೆ ಮಾತಾಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

