ಮಂಗಳೂರು : ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉತ್ತರ ಅಮೆರಿಕಾದಲ್ಲಿ ಪರಿಸರಿಸುವ ಉದ್ದೇಶದಿಂದ ಸ್ಥಾಪನೆಯಾದ ಉತ್ತರ ಅಮೆರಿಕ ವಿಶ್ವ ಕನ್ನಡ ಸಂಘ (ನಾವಿಕ ) ಕಳೆದ 16 ವರ್ಷಗಳಿಂದ ಹಲವು ಕನ್ನಡಪರ ಚಟುವಟಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬರುತ್ತಿದೆ .ಈ ಪ್ರಯುಕ್ತ 2027 ಸೆಪ್ಟೆಂಬರ್ 3 ರಿಂದ 5 ನೇ ತಾರೀಕಿನವರೆಗೆ ಅಮೇರಿಕಾದ ಅಟ್ಲಾಂಟಾ ರಾಜ್ಯದ, ಸೌತ ಕನ್ವೆನ್ಸನ್ ಸೆಂಟರ್ ಅಟ್ಲಾಂಟಾದಲ್ಲಿ,”ನಾವಿಕ- ವಿಶ್ವ ಕನ್ನಡಿಗರ ಸಮ್ಮೇಳನ “ನಡೆಯಲಿದೆ ಎಂದು ನಾವಿಕ ಸಂಘದ ಅಧ್ಯಕ್ಷೆಯಾದ ಡಾ|ಅನ್ನಪೂರ್ಣ ಭಟ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ನಾವಿಕ ಸಂಘಟನೆಯು ಕರುನಾಡು ಮತ್ತು ಅಮೆರಿಕಾದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ. ಸಂಘವು ಈ ವರ್ಷದ ನವೆಂಬರ್ ತಿಂಗಳಿನಲ್ಲಿ ದುಬೈಯಲ್ಲಿ ಕನ್ನಡ ಸಮ್ಮೇಳನವನ್ನು ನಡೆಸಲು ಈಗಾಗಲೇ ರೂಪುರೇಷೆಯನ್ನು ಹಾಕಲಾಗಿದೆ ಎಂದು ತಿಳಿಸಿದರು.
ಸಂಘವು ವಿಶ್ವದ ಬೇರೆ ಬೇರೆ ಭಾಗಗಳಿಂದ ಕನ್ನಡ ನಾಡು, ನುಡಿ, ಸಂಸ್ಕೃತಿ, ಆರ್ಥಿಕತೆ, ಸಾಮಾಜಿಕ ಸುಧಾರಣೆ, ಉದ್ಯಮಶೀಲತೆ, ಪರಿಸರ, ಶಿಕ್ಷಣ, ಮುಂತಾದ ಕ್ಷೇತ್ರಗಳಲ್ಲಿ ದುಡಿದು ಅನುಭವ ಮತ್ತು ಆಲೋಚನೆ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಕನ್ನಡ ಮತ್ತು ಕನ್ನಡಿಗರ ಭವಿಷ್ಯದ ಕಾರ್ಯಸೂಚಿಯನ್ನು ಸಿದ್ಧಪಡಿಸುವ ಉದ್ದೇಶವಿದೆ. ಈ ಮೂಲಕ ಬದಲಾಗುತ್ತಿರುವ ಜಾಗತೀಕರಣದ ಈ ಸಂಕ್ರಮಣ ಕಾಲದಲ್ಲಿ ಮುಂದಿನ ತಲೆಮಾರಿಗೆ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ನೀಡುವ ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ಡಾ|ಜಿ. ಕೆ ಭಟ್ ,ಡಾ|ರಾಜಲಕ್ಷ್ಮಿ ,ಡಾ|ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು .

