ಮಂಗಳೂರು : ಕಾಸರಗೋಡು ಜಿಲ್ಲೆಯ ಕಯ್ಯಾರು ಗ್ರಾಮದ ಐತಿಹಾಸಿಕ ಹಾಗೂ ಭಾವನಾತ್ಮಕ ಸಂಬಂಧ ಹೊಂದಿರುವ ಹಳೆಯ ಚರ್ಚ್ ಕಟ್ಟಡವನ್ನು ಕೆಡವಿ ನೆಲಸಮ ಮಾಡಿದ್ದು ಈ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಎಲ್ಲ ಸಮುದಾಯದವರಿಗೂ ಈ ಕಟ್ಟಡದೊಂದಿಗೆ ಭಾವನಾತ್ಮಕ ಸಂಬಂಧ ಇದೆ. “ಇದು ಕೇವಲ ಒಂದು ಕಟ್ಟಡವಲ್ಲ; ನಮ್ಮ ಊರಿನ ಗುರುತು. ಬಹುಮತದ ಆಧಾರದ ಮೇಲೆ, ಏಕಪಕ್ಷೀಯವಾಗಿ ಅಹಂಕಾರದ ನಿಲುವಿನಿಂದ ಇಂತಹ ಐತಿಹಾಸಿಕ ಕಟ್ಟಡವನ್ನು ಕೆಡವಲು ಯತ್ನಿಸುವುದು ಸರಿಯಲ್ಲ,” ಎಂದು ಚಿತ್ರಕಲಾವಿದರು ಮತ್ತು ಪ್ರಾಚ್ಯವಸ್ತು ಪ್ರೇಮಿಗಳಾದ ವಿಲ್ಸನ್ ಜೆ.ಪಿ. ಡಿಸೋಜಾ ಕಯ್ಯಾರು ಹೇಳಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 1953ರಲ್ಲಿ ಚರ್ಚ್ ನಿರ್ಮಾಣ ಕಾರ್ಯ ಪ್ರಾರಂಭವಾಗಿ, 1956 ಎಪ್ರಿಲ್ 25 ರಂದು ರೋಮನ್ ಗೋಥಿಕ್ ಸಾಂಪ್ರದಾಯಿಕ ಶೈಲಿಯ ಕ್ರಿಸ್ತರಾಜ ಚರ್ಚ್ ಆ ಕಾಲದ ಬಿಷಪ್ಗಳಾದ ಬೇಸಿಲ್ ಎಫ್.ಡಿ ಸೋಜಾ, ಪ್ಯಾಟ್ರಿಕ್ ಪೆರೆರಾ ಅವರು ಉದ್ಘಾಟಿಸಿದ್ದರು.
ಪ್ರಸ್ತುತ ಪಾದ್ರಿಯಾಗಿರುವ ವಿಶಾಲ್ ಮೋನಿಸ್ ಅವರ ನೇತೃತ್ವದಲ್ಲಿ ಹೊಸ ಚರ್ಚಿನ ಕಟ್ಟಡ ನಿರ್ಮಾಣ ಕಾರ್ಯ ನಿಗದಿತ ಬೇರೆಯೇ ಸ್ಥಳದಲ್ಲಿ ಪ್ರಗತಿಯಲ್ಲಿದ್ದು, ಹೊಸ ಕಟ್ಟಡಕ್ಕೆ ಯಾವುದೇ ರೀತಿಯ ತೊಡಕು ಹಳೆಯ ಕಟ್ಟಡದಿಂದ ಇರಲಿಲ್ಲ. ಆದರೆ ಹಳೆಯ ಚರ್ಚನ್ನು ಧ್ವಂಸಗೊಳಿಸುವ ಸಮಿತಿಯ ಅವೈಜ್ಞಾನಿಕ ಸ್ವಾರ್ಥಭರಿತ ನಿರ್ಧಾರ ಅನೇಕ ಮಂದಿಗೆ ಆಳವಾದ ನೋವನ್ನುಂಟು ಮಾಡಿದೆ.
ಸಂಕಷ್ಟದ ಕಾಲದಲ್ಲಿ ನಮ್ಮ ಹಿರಿಯರ ಬೆವರು ಮತ್ತು ಹೋರಾಟದಿಂದ ನಿರ್ಮಿಸಲ್ಪಟ್ಟ ಈ ಸುಂದರ ಕಟ್ಟಡ ಭವಿಷ್ಯದ ಪೀಳಿಗೆಗಳಿಗೆ ಸ್ಮಾರಕವಾಗಿ ನಿಲ್ಲಬೇಕಿತ್ತು. ನಮ್ಮ ಊರಿನ ಸೌಂದರ್ಯವನ್ನು ಜಗತ್ತಿಗೆ ತೋರಿಸಬಲ್ಲ ರೋಮನ್-ಗೋಥಿಕ್ ಶೈಲಿಯ ಕಲಾತ್ಮಕ ಸಾಕ್ಷಿಯಾಗಿ ಉಳಿಯಬೇಕು ಎನ್ನುವ ಬೇಡಿಕೆಗಳಿಗೆ ಕಿಂಚಿತ್ತೂ ಗೌರವ ಕೊಡದೆ ಪಾದ್ರಿ ಹಾಗೂ ಸಮಿತಿಯ ವಿವೇಚನೆಯಿಲ್ಲದ ಕೃತ್ಯಕ್ಕೆ ಇಂದು ದಶಕಗಳಿಂದ ಇದ್ದಂತಹ ಅದ್ಭುತ ವಾಸ್ತುಶೈಲಿಯ ಕಲಾತ್ಮಕ ಮಂದಿರವೊಂದು ಧರೆಗುರುಳಿಸಲಾಗಿದೆ ಎಂದರು.
ಈಗ ಕಟ್ಟಡದ ಸ್ಥಿರತೆ ಕುರಿತು ಪ್ರಶ್ನೆ ಎತ್ತಲಾಗಿದ್ದು, ‘ಸ್ಟೆಬಿಲಿಟಿ ಸರ್ಟಿಫಿಕೇಟ್’ ಪಡೆಯಬೇಕೆಂದು ಸೂಚಿಸಲಾಗಿತ್ತು. ಹಳೆಯ ಕಟ್ಟಡದ ಸ್ಥಿರತೆ ಪ್ರಮಾಣೀಕರಿಸಲು NITK ಸುರತ್ಕಲ್ ಇವರಿಂದ ಸಂಪೂರ್ಣ ಮಾಹಿತಿಯನ್ನಾಧರಿಸಿ ಸುಮಾರು 27,000 ರೂ. ವೆಚ್ಚ ಭರಿಸಿ ಪ್ರಮಾಣ ಪತ್ರ ತಯಾರಿಸಿ ಕಳುಹಿಸಲಾಗಿತ್ತು. ಸಂರಕ್ಷಣಾ ಆರ್ಕಿಟೆಕ್ಟ್ ಅವರಿಂದ ರಿಪೋರ್ಟ್ ತಯಾರಿಸಿದ್ದೆವು. ಅದಕ್ಕೆ ಅನುಗುಣವಾಗಿ ಎನ್ಐಟಿಕೆ ಮೂಲಕ ರಾಷ್ಟ್ರೀಯ ಮಟ್ಟದ ಸ್ಥಿರತೆ ಪ್ರಮಾಣಪತ್ರವನ್ನು ಪಡೆಯಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. “ಇದು ಕರ್ನಾಟಕ ಮಟ್ಟದಲ್ಲೇ ಅಲ್ಲ, ದೇಶದ ಮಟ್ಟದಲ್ಲಿ ಮಾನ್ಯತೆ ಪಡೆದ ಪ್ರಮಾಣಪತ್ರ. ಆದರೂ ಅದನ್ನು ಪರಿಗಣಿಸದೆ ಕಟ್ಟಡ ಕೆಡವಲು ಮುಂದಾಗಿರುವುದು ವಿಷಾದನೀಯ,” ಎಂದರು.

ಹೊಸ ಚರ್ಚ್ ನಿರ್ಮಾಣಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಈಗಿನ ಕಟ್ಟಡದಿಂದ ಸುಮಾರು 80 ಮೀಟರ್ ದೂರದಲ್ಲಿ ಹೊಸ ಚರ್ಚ್ ನಿರ್ಮಿಸಲು ಅವಕಾಶವಿದೆ ಎಂದು ಹೇಳಲಾಗಿದೆ. “ಹೊಸದು ಕಟ್ಟುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹಳೆಯ ಐತಿಹಾಸಿಕ ಕಟ್ಟಡವನ್ನು ಉಳಿಸಬೇಕು,” ಎಂದು ಅವರು ಸ್ಪಷ್ಟಪಡಿಸಿದರು. “ವಾಸ್ತುಶಿಲ್ಪ, ನೃತ್ಯ, ಸಂಗೀತ – ಯಾವ ಕಲೆಯಾಗಲಿ ಅದು ಇತಿಹಾಸವಾದಾಗ ಅಮರವಾಗುತ್ತದೆ. ಹಾಗೆಯೇ ವಾಸ್ತುಕಲೆಯ ಈ ಚರ್ಚ್ ನಮ್ಮ ನಾಡಿಗೆ ಗೌರವ ತರುತ್ತದೆ. ಇಂತಹ ಕಟ್ಟಡಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ,” ಎಂದು ಅವರು ಮನವಿ ಮಾಡಿದರು.
ಈ ವಿಚಾರದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಆಡಳಿತ ಹಾಗೂ ಸಂಬಂಧಪಟ್ಟ ಪಾದ್ರಿಗಳೇ ಮುಖ್ಯ ಹೊಣೆಗಾರರು ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಅನೀಶ್ ಸುವಾರಿಸ್, ಆನ್ಸ್ಟನ್ ಸುವಾರಿಸ್, ಆಸ್ವಾಲ್ಡ್ ಡಿಸೋಜಾ, ಪ್ರಕಾಶ್ ನೊರೊನ್ಹಾ ಮುಂತಾದವರು ಉಪಸ್ಥಿತರಿದ್ದರು .

