ಹುಬ್ಬಳ್ಳಿ : ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಬದುಕಲು ಸಂಕಲ್ಪಿಸಿ, ತಮ್ಮ ಪಠ್ಯಕ್ರಮದ ಓದಿನೊಂದಿಗೆ ಉನ್ನತ ವ್ಯಕ್ತಿತ್ವ ಸಂಪಾದಿಸಬೇಕೆಂದು ನಗರದ ಗ್ಲೋಬಲ್ ಕಾಲೇಜಿನ ಪ್ರಾಚಾರ್ಯ ಡಾ. ಅಶ್ವಿನಿಕುಮಾರ್ ಕೋಟಿ ಕರೆ ನೀಡಿದರು.
ಅವರು ಘಂಟಿಕೇರಿಯ ಎಸ್.ಜೆ.ಆರ್.ವ್ಹಿ.ಪಿ. ಮಂಡಲದ ಶಾಂತಿನಿಕೇತನ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ 10ನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಗಳೊಂದಿಗೆ ತಮ್ಮ ವ್ಯಾಸಂಗದ ವಿಧಾನ ರೂಢಿಸಿಕೊಳ್ಳಬೇಕು. ಓದಿನ ಶಿಸ್ತು, ಸಮಯ ಪ್ರಜ್ಞೆ ಹಾಗೂ ಆತ್ಮವಿಶ್ವಾಸವನ್ನು ಹೊಂದಿದಾಗ ರಾಷ್ಟ್ರಬಯಸುವ ಉತ್ಕೃಷ್ಟ ಮಾನವಸಂಪನ್ಮೂಲವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದೂ ಕೋಟಿ ಸಲಹೆ ನೀಡಿದರು.

ಎಸ್.ಜೆ.ಆರ್.ವ್ಹಿ.ಪಿ. ಮಂಡಲದ ಉಪಾಧ್ಯಕ್ಷ ಮಹೇಂದ್ರಕುಮಾರ್ ಪಾಲ್ಗೋಟ ಮಾತನಾಡಿ, ಓದಿದ ಶಾಲೆಗೆ ಕಳಂಕ ಬಾರದ ರೀತಿಯಲ್ಲಿ ವಿದ್ಯಾರ್ಥಿಗಳು ನೈತಿಕ ಶಿಸ್ತನ್ನು ಕಾಯ್ದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಶಾಲೆಯ ಪ್ರಿನ್ಸಿಪಾಲ್ ಎಂ. ಜಯಲಕ್ಷ್ಮಿ ಮಾತನಾಡಿ, ಭಾರತದ ಅತ್ಯುನ್ನತ ಸ್ಥಾನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿರಬೇಕೆಂದು ಬಯಸುತ್ತೇವೆ ಎಂದರು. 10ನೆಯ ತರಗತಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.

ಸಂಸ್ಥೆಯ ನಿರ್ದೇಶಕ ಮಹಾವೀರ್ ಜೈನ್, ಆಡಳಿತಾಧಿಕಾರಿ ಬಸವರಾಜ ಶೆಟ್ಟರ್ ಇದ್ದರು. ಸಂಸ್ಥೆಯ ಅಧ್ಯಕ್ಷ ಭವರ್ಲಾಲ್ ಜೈನ್ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕೋರಿ ನೀಡಿದ್ದ ಸಂದೇಶ ಓದಲಾಯಿತು. ನಿಶಾದ್ ಸ್ವಾಗತಿಸಿದರು. ಶಿಕ್ಷಕಿ ಆಶಾ ವಂದಿಸಿದರು. 9ನೆಯ ತರಗತಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.


