ಟೆಹ್ರಾನ್ : ಅಮೆರಿಕ-ಇಸ್ರೇಲಿ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ ಎರಡು ದಿನಗಳ ನಂತರ, ಅವರ ಪತ್ನಿ ಮನ್ಸೌರಾ ಖೋಜಾಸ್ತೆ ಕೂಡ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಅವರಿಗೆ 79 ವರ್ಷ ವಯಸ್ಸಾಗಿತ್ತು.
ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹಾಗೂ ಅವರ ಪತ್ನಿ ಮನ್ಸೌರೆ ತೀವ್ರವಾಗಿ ಗಾಯಗೊಂಡಿದ್ದರು. ಖಮೇನಿ ಅವರು ದಾಳಿಯ ವೇಳೆಯೇ ಮೃತ ಪಟ್ಟಿದ್ದಾರೆ, ಗಂಭೀರ ಸ್ಥಿತಿಯಲ್ಲಿದ್ದ ಮನ್ಸೌರೆ ಅವರನ್ನು ಟೆಹ್ರಾನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನಗಳ ಚಿಕಿತ್ಸೆ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ. ಇರಾನಿನ ಮಾಧ್ಯಮಗಳು ಅವರ ಸಾವನ್ನು ‘ಹುತಾತ್ಮತೆ’ ಎಂದು ಬಣ್ಣಿಸಿವೆ.

ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ ಇರಾನ್ನ ಮಶಾದ್ನಲ್ಲಿ ಜನಿಸಿದರು. ಅವರು ಐಆರ್ಐಬಿ (ಇರಾನಿಯನ್ ಬ್ರಾಡ್ಕಾಸ್ಟಿಂಗ್) ನ ಮಾಜಿ ಉಪ ನಿರ್ದೇಶಕ ಹಸನ್ ಖೋಜಾಸ್ತೆ ಬಾಗರ್ಜಾಡೆ ಅವರ ಸಹೋದರಿ. ಅವರ ತಂದೆ ಮೊಹಮ್ಮದ್ ಇಸ್ಮಾಯಿಲ್ ಖೋಜಾಸ್ತೆ ಬಾಗರ್ಜಾಡೆ ಅವರು ಮಶಾದ್ನ ಪ್ರಸಿದ್ಧ ಉದ್ಯಮಿಯಾಗಿದ್ದರು. ಅವರು 1964 ರಲ್ಲಿ ಖಮೇನಿ ಅವರನ್ನು ವಿವಾಹವಾದರು ಮತ್ತು ಸಾಮಾನ್ಯವಾಗಿ ಸಾರ್ವಜನಿಕ ಜೀವನದಿಂದ ದೂರವಿದ್ದರು. ಅವರಿಗೆ ಆರು ಮಕ್ಕಳಿದ್ದಾರೆ. ಅವರಲ್ಲಿ ನಾಲ್ಕು ಮಂದಿ ಗಂಡು ಮಕ್ಕಳು ಮೊಸ್ತಫಾ, ಮೊಜ್ತಾಬಾ, ಮಸೌದ್ ಹಾಗೂ ಮೇಸಮ್ ಮತ್ತು ಇಬ್ಬರು ಹೆಣ್ಣು ಮಕ್ಕಳು, ಹೋಡಾ ಮತ್ತು ಬೋಶ್ರಾ.
ದಾಳಿಯ ಸಮಯದಲ್ಲಿ ಅವರು ತಮ್ಮ ಪತಿಯೊಂದಿಗೆ ಇದ್ದರು, ಇದರಿಂದಾಗಿ ಗಂಭೀರ ಗಾಯಗಳಾಗಿದ್ದವು. ವೈದ್ಯರು ಅವರನ್ನು ಉಳಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು, ಆದರೆ ಅವರು ಕೋಮಾಕ್ಕೆ ಬಿದ್ದು ಸೋಮವಾರ ನಿಧನರಾದರು.

