ಮಂಗಳೂರು : ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿರುವ ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ.) ವತಿಯಿಂದ ಗೋ ನಂದಿ ಪರಿವಾರ ರಥಯಾತ್ರೆಯು ಅಡ್ಯಾರು ಕಟ್ಟೆಯಿಂದ ಮಾರ್ಚ್ ೫ ಕ್ಕೆ ಉದ್ಘಾಟನೆಗೊಂಡು ಅಡ್ಯಾರಿನ ವೀರಾಂಜನೇಯ ದೇವಸ್ಥಾನದಲ್ಲಿ ಸಪ್ತಾಹದ ಆಚರಣೆಗೆ ಅಣಿಯಾಗಲಿದೆ ಎಂದು ಗೋಸೇವಾ ಗತಿವಿಧಿಯ ದಕ್ಷಿಣ ಪ್ರಾಂತ ಗೋ-ಸೇವಾ ಸಂಯೋಜಕ ಪ್ರವೀಣ್ ಸರಳಾಯ ತಿಳಿಸಿದರು

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋ ನಂದಿ ಪರಿವಾರ ರಥಯಾತ್ರೆಯ ಪ್ರಮುಖ ಉದ್ದೇಶ ಗೋ ರಕ್ಷಣೆಯಾಗಿದೆ . ಗೋ ಕಥಾ ಸಪ್ತಾಹದ ಅಂಗವಾಗಿ ಪ್ರತೀ ದಿನ ಬೆಳಿಗ್ಗೆ 6:00 ರಿಂದ 12:00 ಗಂಟೆ ತನಕ ಉಜ್ಜಯಿನಿಯ ನರ್ಮದೇಶ್ವರ ಶಿವಲಿಂಗಕ್ಕೆ ಭಕ್ತರಿಂದ ಗಂಗಾಜಲದಿಂದ ಸಾಮೂಹಿಕ ಅಭಿಷೇಕ, ಗೋ ಸೂಕ್ತ ಹೋಮ, ಶ್ರೀ ಸೂಕ್ತ ಹೋಮ, ಗೋ ಪೂಜೆ ಮತ್ತು ಭಾಗವತ ಪಾರಾಯಣ ಮತ್ತು ಲೋಕ ಕಲ್ಯಾಣಾರ್ಥ, ಸಾಮೂಹಿಕ ಜಪಯಜ್ಞ ಪ್ರತಿದಿನ ಬೆಳಗ್ಗೆ 10 ರಿಂದ 12 ಗಂಟೆ ವರೆಗೆ ವಿವಿಧ ರೀತಿಯ ಗೋ ಆಧಾರಿತ ಪ್ರಶಿಕ್ಷಣ ನಡೆಯಲಿದೆ. ಗೋ ಆಧಾರಿತ ಚಿಕಿತ್ಸೆ, ಕುಟುಂಬ ಪ್ರಭೋದನ, ಗರ್ಭಸಂಸ್ಕಾರ, ನಾಟಿ ಚಿಕಿತ್ಸೆ, ದೇಶಿ ಆಹಾರ ಪದ್ದತಿ, ಗೋ ಉತ್ಪನ್ನ ತಯಾರಿಕೆ, ಗೋ ಆಧಾರಿತ ಕೃಷಿ, ಮೇಲ್ಬಾವಣಿ ಕೃಷಿ ಇತ್ಯಾದಿ ಇರಲಿದೆ ಎಂದರು.

ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಇದರ ಅಧ್ಯಕ್ಷರಾದ ಭಕ್ತಿ ಭೂಷಣ್ ಜಿ ಮಾತನಾಡಿ, ಗೋವಿನ ಸಂತತಿ ಉಳಿಸುವುದು ಇಂದು ಮಹತ್ವದ ಕಾರ್ಯವಾಗಿದೆ . ಈಗಾಗಲೇ ಗೋಮಯವನ್ನು ಪಂಚ ದ್ರವ್ಯಗಳೊಂದಿಗೆ ಬೆರಸಿ ಉಂಡೆಯನ್ನು ಮಾಡಿ ಹಂಚುವ ಕೆಲಸವನ್ನು ಮಾಡಲಾಗುತ್ತಿದೆ .ಇದು ಪರಿಸರ ಸ್ನೇಹಿಯಾಗಿದ್ದು ಉತ್ತಮ ಗುಣ ಮಟ್ಟದ ಧನಾತ್ಮಕತೆಯ ವಾತಾವರಣಕ್ಕೆ ಕಾರಣವಾಗಲಿದೆ . ಕಳೆದ ಮೂರು ವರ್ಷಗಳಿಂದ ಅನುಕ್ರಮವಾಗಿ,ಏಳು,ನಲವತ್ನಾಲ್ಕು, 95 ದಿನಗಳ ತಾಲೂಕು, ಮೂರು ಜಿಲ್ಲೆ ಹಾಗೂ ರಾಜ್ಯಾದ್ಯಂತ ಗೋ ಹಾಗೂ ನಂದಿ ರಥಯಾತ್ರೆ ನಡೆಸಿ ಜನಮಾನಸದಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿದೆ ಎಂದರು .
ಈ ಕಾರ್ಯದಲ್ಲಿ ಅನೇಕ ಗೋಪ್ರೇಮಿಗಳು, ಮಠ ಮಂದಿರಗಳು,ಸಾಮಾಜಿಕ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಕೈಜೋಡಿಸಿವೆ. ಸಾಮೂಹಿಕ ಪ್ರಯತ್ನದ ಕಾರಣಕ್ಕೆ ಇದು ಅತ್ಯಂತ ಯಶಸ್ವಿ ಆಗಿದೆ. ಮನೆ ಮನೆಗಳಿಗೆ ಗವ್ಯ ಉತ್ಪನ್ನ ಪರಿಚಯಿಸಿ ತಲುಪಿಸುವ ಕಾರ್ಯ ನಡೆದಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ನಿವೇದಿತಾ ಶೆಟ್ಟಿ , ರಮೇಶ್ ತುಂಬೆ , ರಮಿತಾ ಸೂರ್ಯವಂಶಿ ಮುಂತಾದವರು ಉಪಸ್ಥಿತರಿದ್ದರು .

