ಮಂಗಳೂರು : ಇಸ್ರೇಲ್ ಮತ್ತು ಅಮೆರಿಕ, ಇರಾನ್ ವಿರುದ್ಧ ದಾಳಿ ನಡೆಸಿದ ನಂತರ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪಶ್ಚಿಮ ಏಷ್ಯಾದ ಪ್ರಮುಖ ತಾಣಗಳ ನಡುವೆ ಕಾರ್ಯನಿರ್ವಹಿಸುವ ಅಂತರರಾಷ್ಟ್ರೀಯ ವಿಮಾನಗಳನ್ನು ಮಾರ್ಚ್ 4 ರವರೆಗೆ ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.
ಗಲ್ಫ್ ರಾಷ್ಟ್ರಗಳಿಗೆ ಮಂಗಳವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರು ಮತ್ತು ಮಸ್ಕತ್ ನಡುವೆ ಎರಡು ವಿಮಾನಗಳನ್ನು ಹಾರಿಸಿದ್ದು, ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ದೃಷ್ಟಿಯಿಂದ ವಾಯುಪ್ರದೇಶ ಮುಚ್ಚಲ್ಪಟ್ಟ ಕಾರಣ ಮಂಗಳೂರು ಮತ್ತು ದೋಹಾ, ದುಬೈ, ಕುವೈತ್, ದಮ್ಮಾಮ್ ಮತ್ತು ಅಬುಧಾಬಿ ನಡುವಿನ ಆಗಮನ ಮತ್ತು ನಿರ್ಗಮನ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಮಂಗಳೂರಿನಿಂದ ಮಸ್ಕತ್ಗೆ ಹೋದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ (IX 817) 143 ಪ್ರಯಾಣಿಕರು ಮತ್ತು 4 ಶಿಶುಗಳನ್ನು ಹೊತ್ತೊಯ್ದರೆ, ಮಸ್ಕತ್ನಿಂದ ಮಂಗಳೂರಿಗೆ ಬಂದಿಳಿದ ವಿಮಾನ (IX 818) 162 ಪ್ರಯಾಣಿಕರು ಮತ್ತು 7 ಶಿಶುಗಳನ್ನು ಹೊಂದಿತ್ತು ಎಂದು ವಿಮಾನಯಾನ ಮೂಲಗಳು ತಿಳಿಸಿವೆ.
ಮಾರ್ಚ್ 3 ಬುಧವಾರದಂದು ಮಂಗಳೂರು-ದೋಹಾ (IX 821), ದೋಹಾ-ಮಂಗಳೂರು (IX 822), ಮಂಗಳೂರು-ದುಬೈ (IX 813), ಮಂಗಳೂರು- ಕುವೈತ್ (IX 851), ಮಂಗಳೂರು-ದಮ್ಮಾಮ್ (IX 847), ಮತ್ತು ಮಂಗಳೂರು-ಅಬುಧಾಬಿ ವಿಮಾನಗಳನ್ನು (ಆಗಮನ – ನಿರ್ಗಮನ) ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸಲು ಯೋಜಿಸಿದ್ದ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.

