ಮಂಗಳೂರು : ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತಂದಿರುವ ಒಳಮೀಸಲಾತಿ ಕ್ರಮದಲ್ಲಿ ಹಿಂದಿನ 101 ಜಾತಿಗಳನ್ನು ಪ್ರವರ್ಗ ಎ, ಬಿ, ಸಿ ಎಂದು ಮರುವರ್ಗೀಕರಿಸಿರುವುದರಿಂದ ಹಲವು ಗೊಂದಲಗಳು ಉಂಟಾಗಿವೆ ಎಂದು ಆದಿದ್ರಾವಿಡ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಮಿತಿಯ ಸಲಹೆಗಾರ ಅನಿಲ್ ಕುಮಾರ್ ಮಾತನಾಡಿ ,ಇತ್ತೀಚಿಗೆ ನ್ಯಾಯಮೂರ್ತಿ ನಾಗ್ ಮೋಹನ್ದಾಸ್ ಅವರು “ಆದಿದ್ರಾವಿಡವು ಪ್ರತ್ಯೇಕ ಜಾತಿಯಲ್ಲ, ಜಾತಿಗಳ ಗುಂಪು” ಎಂದು ನೀಡಿರುವ ಹೇಳಿಕೆಯಿಂದ ನಮಗೆ ಅಸಮಾಧಾನ ಉಂಟಾಗಿದೆ . ಹಲವು ದಶಕಗಳಿಂದ ಸರಕಾರವೇ ಆದಿದ್ರಾವಿಡ ಎಂದು ಜಾತಿ ಪ್ರಮಾಣಪತ್ರ ನೀಡುತ್ತಿದ್ದರೆ, ಈಗ ಅದನ್ನು ಗುಂಪು ಎಂದು ಹೇಳುವುದು ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಕಳವಳ ವ್ಯಕ್ತ ಪಡಿಸಿದರು

ಆರು ಜಿಲ್ಲೆಗಳಲ್ಲಿ ಸುಮಾರು 8 ಲಕ್ಷ ಜನಸಂಖ್ಯೆ ಹೊಂದಿರುವ ನಮ್ಮ ಸಮುದಾಯದವರು ಅಸಲರು, ಕಲ್ಲಾಡಿ, ಮುಂದಾಲ, ಮುಗೇರ, ಹೊಳೆಯ, ಆದಿಕರ್ನಾಟಕ ಮೊದಲಾದ ವಿವಿಧ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಕೃಷಿಯೇ ಕುಲಕಸುಬಾಗಿದ್ದು, ಬಹುತೇಕರು ಕೃಷಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ಬಲಗೈ ಹಾಗೂ ಎಡಗೈ ಗುಂಪುಗಳಲ್ಲಿ ಶಕ್ತಿಶಾಲಿ ಸಮುದಾಯಗಳು ಸೇರಿರುವುದರಿಂದ ನಮ್ಮ ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ದೊರೆಯುತ್ತಿಲ್ಲ. ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ಒಳಮೀಸಲಾತಿಯಿಂದಲೂ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಸಮುದಾಯಕ್ಕೆ ಪ್ರತ್ಯೇಕ ಉಪಜಾತಿ ಮಾನ್ಯತೆ ನೀಡುವಂತೆ ಹಾಗೂ “ಸಾರಮಣಿ ಸಮಾಜ” ಎಂದು ಗುರುತಿಸಿ ಜಾತಿ ಪ್ರಮಾಣಪತ್ರ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪರಿಶಿಷ್ಟ ಪಂಗಡದಲ್ಲಿ ವಾಲ್ಮೀಕಿ ಸಮುದಾಯ, ಕ್ಷೌರಿಕರನ್ನು ಸವಿತಾ ಸಮಾಜ ಹಾಗೂ ವಿಶ್ವಕರ್ಮ ಸಮಾಜಕ್ಕೆ ನೀಡಿರುವ ಮಾನ್ಯತೆಯಂತೆಯೇ, ಆದಿದ್ರಾವಿಡ ಉಪಜಾತಿಯಾಗಿ ಸಾರಮಣಿ ಸಮಾಜವನ್ನು ಗುರುತಿಸಿ ಶೇಕಡಾ 2ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಮೋಹನ್ , ಶಿವರಾಜ್, ಸೂರಜ್ ಬಳ್ಳಾಲ್ ಬಾಗ್ , ವಿಜಯ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.


