ಮಂಗಳೂರು : ಬಜೆಟ್ ಅಧಿವೇಶನದ ಪ್ರಾಮುಖ್ಯತೆ , ರಾಜಸ್ವ ಸಂಗ್ರಹ, ಆರ್ಥಿಕ ವ್ಯವಸ್ಥೆ, ಅನುದಾನಗಳ ವರ್ಗೀಕರಣ , ವಿಗುತೆ ಬಜೆಟ್, ಕೊರತೆ ಬಜೆಟ್ ಬಗ್ಗೆ ಶಾಸಕರಿಗೆ ಕಾರ್ಯಾಗಾರವನ್ನು ಮಾ.9ರಂದು ಸಂಜೆ 4ಕ್ಕೆ ಲಲಿತ್ ಅಶೋಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿಕೊಡಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.

ಅವರು ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ 17 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಹಣಕಾಸು ನಿರ್ವಹಣೆ ಕುರಿತು ಶಾಸಕರಿಗೆ ಮಾಹಿತಿ ನೀಡಲಿದ್ದಾರೆ. ಶಾಸಕರಿಗೆ ಇರುವ ಸಂಶಯಗಳನ್ನು ನಿವಾರಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಇಂತಹ ಕಾರ್ಯಾಗಾರ ನಡೆಯುತ್ತಿದೆ . ಈ ಭಾಗದ ಶಾಸಕರಿಗೂ ಈಗಾಗಲೇ ಆಹ್ವಾನವನ್ನು ನೀಡಲಾಗಿದೆ ಎಂದರು .
ಸಾಲ ಮಾಡಿ ಬಜೆಟ್ ಮಂಡಿಸಲಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಖಾದರ್, ಟೀಕೆಗಳು ಪ್ರಜಾಪ್ರಭುತ್ವದ ಭಾಗವಾಗಿದ್ದು ಅಧಿವೇಶನದಲ್ಲಿ ಚರ್ಚೆಯಾಗಲಿದೆ ಎಂದರು. ಉಳ್ಳಾಲ ಕ್ಷೇತ್ರದಲ್ಲಿ ಹೊಸ ಪೊಲೀಸ್ ಠಾಣೆಗಳ ಅಗತ್ಯವಿದ್ದು, ನೇತ್ರಾವತಿ ನದಿ ಬದಿಯ ರಸ್ತೆ ಕಾಮಗಾರಿಗೆ ಹೆಚ್ಚುವರಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 10 ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ಗಳಿಗೆ ಮಂಜೂರಾತಿ ನೀಡಲಾಗಿದ್ದು, ಜಿಲ್ಲೆಯಲ್ಲೂ ಒಂದು ಸ್ಥಾಪನೆಗಾಗಿ ಬೇಡಿಕೆ ಇಡಲಾಗಿದೆ. ಇದರಿಂದ ಯುವಕರಿಗೆ ಪ್ರಾಯೋಗಿಕ ಕೌಶಲ್ಯ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಅವರು ಹೇಳಿದರು.

