ಭೋಪಾಲ್: ಮಧ್ಯಪ್ರದೇಶದಲ್ಲಿ 90 ವರ್ಷದ ವೃದ್ಧೆಯ ಮೇಲೆ ನಾಲ್ವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮುಸುಕು ಧರಿಸಿದ ನಾಲ್ವರ ಗುಂಪೊಂದು ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ. ಘಟನೆಯ ಬಗ್ಗೆ ವಿಶೇಷ ಪೊಲೀಸ್ ತಂಡ ತನಿಖೆ ಆರಂಭಿಸಿದೆ. ಅತ್ಯಾಚಾರಕ್ಕೊಳಗಾದ ವೃದ್ಧ ಮಹಿಳೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ಜಮೀನಿನಲ್ಲಿರುವ ಗುಡಿಸಲಿನಲ್ಲಿ ವೃದ್ಧ ಮಹಿಳೆಯ ಒಬ್ಬಂಟಿಯಾಗಿ ವಾಸಿಸುತ್ತಿದ್ದು ರಾತ್ರಿ ವೇಳೆ ನಾಲ್ವರು ಮುಸುಕುಧಾರಿಗಳು ಬಂದು ವೃದ್ಧ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದಾರೆ. ವೃದ್ಧ ಮಹಿಳೆ ಮರುದಿನ ಬೆಳಿಗ್ಗೆ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ತಮ್ಮ ಮಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಮಗಳು ಮತ್ತು ಸಂಬಂಧಿಕರು ಬಂದು ವೃದ್ಧ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು.
ಘಟನೆಯ ತನಿಖೆಯನ್ನು ಮೂರು ತಂಡಗಳಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 10,000 ರೂ. ಬಹುಮಾನ ನೀಡುವುದಾಗಿಯೂ ಪೊಲೀಸರು ಘೋಷಿಸಿದ್ದಾರೆ.

