ಉತ್ತರ ಪ್ರದೇಶ : ಕಾನ್ಪುರದ ದೇವಾಲಯದ ಅರ್ಚಕರೊಬ್ಬರು ರೆಸ್ಟೋರೆಂಟ್ನಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದ್ದು, ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ರಾವತ್ಪುರದ ಕೇಶವಪುರಂ ಪ್ರದೇಶದ ಭೂತೇಶ್ವರ ದೇವಸ್ಥಾನದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ನಂತರ ಸುಮಾರು 50 ರಿಂದ 60 ಜನರು ದೇವಾಲಯದಲ್ಲಿ ಜಮಾಯಿಸಿ, ಅರ್ಚಕರು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು. ಅವರನ್ನು ದೇವಾಲಯದಿಂದ ಹೊರ ಎಳೆದು ಅವರ ಮೇಲೆ ಹಲ್ಲೆ ನಡೆಸಲಾಗಿದೆ, ದೇವಾಲಯದಲ್ಲಿ ಹಾಜರಿದ್ದ ಹಲವಾರು ಮಹಿಳೆಯರು ಮಧ್ಯಪ್ರವೇಶಿಸಿ ಅವರನ್ನು ಗುಂಪಿನಿಂದ ರಕ್ಷಿಸಲು ಪ್ರಯತ್ನಿಸಿದರು, ದಾಳಿಯನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸಿದರು. ಆದರೆ, ಗುಂಪಿನ ಕೆಲವು ಸದಸ್ಯರು ಮಹಿಳೆಯರಿಗೆ ಕಪಾಳಮೋಕ್ಷ ಮಾಡಿ ಅರ್ಚಕರ ಮೇಲೆ ಹಲ್ಲೆ ಮುಂದುವರಿಸಿದರು.

ಗೋಲು ಪಂಡಿತ್ ಎಂದೂ ಕರೆಯಲ್ಪಡುವ ಪ್ರಶಾಂತ್ ಗಿರಿ ಎಂಬ ಅರ್ಚಕ ದೇವಾಲಯದ ಮಹಾಂತ ಮತ್ತು ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದು, ವೈರಲ್ ಆಗಿರುವ ಛಾಯಾಚಿತ್ರವನ್ನು ತನ್ನ ಹೆಸರಿಗೆ ಮಸಿ ಬಳಿಯಲು ಈ ರೀತಿ ತಿರುಚಲಾಗಿದೆ. ಮತ್ತು ಕೆಲವರು ತಮ್ಮನ್ನು ದೇವಸ್ಥಾನದಿಂದ ತೆಗೆದುಹಾಕಲು ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ರೆಸ್ಟೋರೆಂಟ್ನಲ್ಲಿ ತೆಗೆದ ಹಳೆಯ ಛಾಯಾಚಿತ್ರವನ್ನು ತಾನು ಮಾಂಸಾಹಾರಿ ಆಹಾರ ಸೇವಿಸುತ್ತಿರುವಂತೆ ಬಿಂಬಿಸಲು ತಿರುಚಲಾಗಿದೆ ಎಂದು ಅವರು ಹೇಳಿದ್ದಾರೆ
ತುರ್ತು ಸಹಾಯವಾಣಿ 112 ಮೂಲಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಜನಸಂದಣಿಯಿಂದ ಅರ್ಚಕನನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಹಲ್ಲೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ವೈರಲ್ ವೀಡಿಯೊವನ್ನು ಪರಿಶೀಲಿಸುತ್ತಿದ್ದಾರೆ. ಅರ್ಚಕನ ದೂರಿನ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಯುತ್ತಿದೆ.

