ನವದೆಹಲಿ: ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದ 32 ವರ್ಷದ ಯುವಕ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣ ನೀಡಲು ನ್ಯಾಯಾಲಯ ಅನುಮತಿ ನೀಡಿದೆ. ಈ ಮಹತ್ವದ ತೀರ್ಪು ನೀಡುವಾಗ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದು, ಇಡೀ ದೇಶದ ಗಮನ ಸೆಳೆದಿದೆ.

ಹರೀಶ್ ರಾಣಾ ಒಬ್ಬ ಪ್ರತಿಭಾವಂತ ಯುವಕನಾಗಿದ್ದರು. ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ಅವರು, 2013ರ ಆಗಸ್ಟ್ 20ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದರು. ಈ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರ ಪೆಟ್ಟು ಬಿದ್ದು, ಅಂದಿನಿಂದ ಅವರು ಕೋಮಾದಲ್ಲಿದ್ದರು. ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಪೋಷಣೆಗಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಮೇಲೆ ಅವಲಂಬಿತರಾಗಿದ್ದ ಹರೀಶ್, 13 ವರ್ಷಗಳಿಂದ ಜೀವಂತ ಶವದಂತಿದ್ದರು.

ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿತು. ಇಲ್ಲಿ ಪ್ರಶ್ನೆ ರೋಗಿಯ ಸಾವಿನಲ್ಲಿ ಹಿತಾಸಕ್ತಿ ಇದೆಯೇ ಎಂಬುದಲ್ಲ, ಬದಲಿಗೆ ಜೀವ ಉಳಿಸುವ ಚಿಕಿತ್ಸೆಯನ್ನು ಮುಂದುವರಿಸುವುದರಿಂದ ರೋಗಿಗೆ ಏನಾದರೂ ಪ್ರಯೋಜನವಿದೆಯೇ ? ಎಂದು ಪೀಠ ಪ್ರಶ್ನಿಸಿತು.

ವೈದ್ಯಕೀಯ ವರದಿಗಳ ಪ್ರಕಾರ, ಹರೀಶ್ ಅವರ ಚೇತರಿಕೆಯ ಸಾಧ್ಯತೆ ಶೂನ್ಯವಾಗಿತ್ತು. ಒಬ್ಬ ಯುವಕ 13 ವರ್ಷಗಳಿಂದ ಹಾಸಿಗೆ ಹಿಡಿದು ಪೋಷಕರ ಮೇಲೆ ಅವಲಂಬಿತನಾಗಿದ್ದಾನೆ. ಅವನ ಪೋಷಕರು ಮತ್ತು ಒಡಹುಟ್ಟಿದವರು ಈ ಸುದೀರ್ಘ ಕಾಲ ನಡೆಸಿದ ಹೋರಾಟ ಬೆಲೆಕಟ್ಟಲಾಗದ್ದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ವೈದ್ಯಕೀಯ ಮಂಡಳಿಯ ಶಿಫಾರಸಿನ ಮೇರೆಗೆ, ಮೆಡಿಕಲ್ ಸಪೋರ್ಟ್ ಹಿಂಪಡೆಯಲು ನ್ಯಾಯಾಲಯ ಅನುಮತಿ ನೀಡಿತು.

ತೀರ್ಪು ಓದುವಾಗ ನ್ಯಾಯಮೂರ್ತಿ ಪಾರ್ದಿವಾಲಾ ಅವರು ಒಂದು ಕ್ಷಣ ಭಾವುರಾದರು. ತೀವ್ರ ನೋವಿನಲ್ಲಿದ್ದ ಪೋಷಕರ ಸ್ಥಿತಿ ಮತ್ತು ಹರೀಶ್ ಅವರ ದುರಂತ ಬದುಕನ್ನು ನೆನೆದು ಕಣ್ಣೀರಾಕಿದರು. ನ್ಯಾಯಾಧೀಶರೊಬ್ಬರು ತೀರ್ಪು ನೀಡುವಾಗ ಬಹಿರಂಗವಾಗಿ ಕಣ್ಣೀರಿಡುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಅಪರೂಪದ ಘಟನೆಯಾಗಿದೆ.
ಈ ತೀರ್ಪು 2018 ರ ಸುಪ್ರೀಂ ಕೋರ್ಟ್ನ ನಿಷ್ಕ್ರಿಯ ದಯಾಮರಣದ ನಿಯಮಗಳಿಗೆ ಹೊಸ ಸ್ಪಷ್ಟನೆ ನೀಡಿದೆ. ಅರ್ಥಪೂರ್ಣ ಚೇತರಿಕೆ ಸಾಧ್ಯವಿಲ್ಲದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯುವುದು ಕಾನೂನುಬದ್ಧ ಎಂದು ನ್ಯಾಯಾಲಯ ಹೇಳಿದೆ.

