ಪುತ್ತೂರು : ಧರ್ಮಸ್ಥಳ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪುತ್ತೂರು ಸಹಾಯಕ ಆಯುಕ್ತರು ಮೂರನೇ ಬಾರಿಗೆ ಗಡೀಪಾರು ಆದೇಶ ಹೊರಡಿಸಿದ್ದಾರೆ.
ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಅದರಂತೆ, ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾ.16, 2026 ರಿಂದ ಸೆ.19, 2026ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ. ಈ ಆರು ತಿಂಗಳ ಅವಧಿ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನೆಲೆಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ತಿಮರೋಡಿ ಅವರಿಗೆ ಈ ಹಿಂದೆ ಎರಡನೇ ಬಾರಿಗೆ ಗಡೀಪಾರು ಆದೇಶ ಹೊರಡಿಸಿದಾಗ, ಅವರು ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು, ಆದೇಶವನ್ನು ಮರುಪರಿಶೀಲಿಸುವಂತೆ ಪುತ್ತೂರು ಎಸಿಗೆ ಸೂಚಿಸಿತ್ತು. ಪ್ರತಿವಾದಿಗಳ ಆಕ್ಷೇಪಣೆಗಳನ್ನು ಆಲಿಸಿ, ಕಾನೂನುಬದ್ಧವಾಗಿ ಹೊಸ ಆದೇಶ ಹೊರಡಿಸಲು ಮೂರು ವಾರಗಳ ಕಾಲಾವಕಾಶ ನೀಡಿತ್ತು. ಹೈಕೋರ್ಟ್ ನೀಡಿದ್ದ ಗಡುವಿನ ಹಿನ್ನೆಲೆಯಲ್ಲಿ ಈಗ ಮರುಪರಿಶೀಲನೆ ನಡೆಸಿ ಮೂರನೇ ಬಾರಿ ಈ ಆದೇಶ ಹೊರಡಿಸಲಾಗಿದೆ

