ಮೈಸೂರು : ಮಹಿಳಾ ಅಧಿಕಾರಿಯೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಮುಳ್ಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ವಾಮಿ ಎಂಬವರು ಗ್ರಾಮದಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದರು.ಅವರು ನಿಧನರಾದ ನಂತರ, ಅವರ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿತ್ತು. ಸ್ವಾಮಿ ಅವರು ಸೇವೆ ಸಲ್ಲಿಸಿದ ಅವಧಿಗೆ ಸಂಬಂಧಿಸಿದಂತೆ ಸುಮಾರು ಎರಡು ವರ್ಷದ ಬಾಕಿ ಸಂಬಳ, ಅಂದಾಜು ₹4 ಲಕ್ಷ ರೂಪಾಯಿ ಬಿಡುಗಡೆ ಆಗಬೇಕಿತ್ತು.

ಈ ಬಾಕಿ ಸಂಬಳ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಪಿಡಿಒ ಮಂಜುಳಾ ಅವರು ಮಹದೇವ್ ಬಳಿ ₹50,000 ಲಂಚ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬೇಡಿಕೆಯಿಂದ ಅಸಮಾಧಾನಗೊಂಡ ಮಹದೇವ್ ಅವರು ಲಂಚ ನೀಡಲು ನಿರಾಕರಿಸಿ, ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದರು.
ಪ್ಲಾನ್ನಂತೆ ಮಹದೇವ್ ಅವರು ಪಿಡಿಒಗೆ ₹25,000 ಮೊತ್ತವನ್ನು ಕಚೇರಿಯಲ್ಲೇ ನೀಡಲು ಒಪ್ಪಿಕೊಂಡರು. ಹಣ ಸ್ವೀಕರಿಸುವ ಕ್ಷಣದಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮಂಜುಳಾ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದರು. .
ಮಹಿಳಾ ಪಿಡಿಒ, ಬಂಧನದಿಂದ ತಪ್ಪಿಸಿಕೊಳ್ಳಲು ಕಚೇರಿಯಲ್ಲೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿದ್ದಾರೆ. ತಕ್ಷಣವೇ ಗಾಯಗೊಂಡ ಮಂಜುಳಾ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಪೂರ್ಣಗೊಂಡ ಬಳಿಕ ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆ ಮುಂದುವರಿಸಲಿದ್ದಾರೆ.

