ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಆತಂಕದ ನಡುವೆಯೇ ಕರ್ನಾಟಕಕ್ಕೆ, ಅಮೆರಿಕದಿಂದ ಬೃಹತ್ ಪ್ರಮಾಣದ ಎಲ್ಪಿಜಿ ಹೊತ್ತ ಕಾರ್ಗೋ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಯಶಸ್ವಿಯಾಗಿ ತಲುಪಿದೆ.
ಅಮೆರಿಕದ ಟೆಕ್ಸಾಸ್ ರಾಜ್ಯದಿಂದ ಹೊರಟಿದ್ದ ‘ಪಿಕ್ಸಿಸ್ ಪಯನೀರ್’ (Pyxis Pioneer) ಹೆಸರಿನ ಬೃಹತ್ ಕಾರ್ಗೋ ಹಡಗು ಸುಮಾರು 16,714 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಹೊತ್ತು ತಂದಿದೆ. ಮಾರ್ಚ್ 14 ರಂದು ಅಮೆರಿಕದಿಂದ ಪ್ರಯಾಣ ಬೆಳೆಸಿದ್ದ ಈ ನೌಕೆಯು ಇಂದು ಮಂಗಳೂರು ಬಂದರನ್ನು ಪ್ರವೇಶಿಸಿದೆ. ಈ ಹಡಗು ಪ್ರಮುಖವಾಗಿ ಏಜೀಸ್ ಕಂಪನಿಗೆ ಸೇರಿದ ಎಲ್ಪಿಜಿ ದಾಸ್ತಾನನ್ನು ಹೊತ್ತು ತಂದಿದೆ ಎಂದು ಬಂದರು ಮೂಲಗಳು ಖಚಿತಪಡಿಸಿವೆ.

ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಎಲ್ಪಿಜಿ ಸಿಲಿಂಡರ್ಗಳ ಅಭಾವ ತಲೆದೂರಿತ್ತು. ಸಕಾಲಕ್ಕೆ ಸಿಲಿಂಡರ್ ವಿತರಣೆಯಾಗದೆ ಗ್ರಾಹಕರು ಪರದಾಡುತ್ತಿದ್ದರು. ಈಗ ಅಮೆರಿಕದಿಂದ ಬಂದಿರುವ ಈ 16,714 ಮೆಟ್ರಿಕ್ ಟನ್ ಗ್ಯಾಸ್ನಿಂದಾಗಿ ರಾಜ್ಯದ ಬೇಡಿಕೆಯನ್ನು ಪೂರೈಸಲು ಸುಲಭವಾಗಲಿದೆ. ಬಂದರಿನಲ್ಲಿ ಹಡಗಿನಿಂದ ಎಲ್ಪಿಜಿ ಇಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಇದು ಮಾರುಕಟ್ಟೆಗೆ ವಿತರಣೆಯಾಗಲಿದೆ. ಇದರಿಂದ ಹೋಟೆಲ್ ಉದ್ಯಮ ಹಾಗೂ ಗೃಹ ಬಳಕೆಯ ಸಿಲಿಂಡರ್ಗಳ ಕೊರತೆ ನೀಗುವ ನಿರೀಕ್ಷೆ ಇದೆ.

