ಭಾರತದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಸಂಜಯ್ ಬಂಗಾರ್ ಅವರ ಪುತ್ರ ಅರ್ಯನ್ ಬಂಗಾರ್ ಥೈಲ್ಯಾಂಡ್ ನಲ್ಲಿ ತಮ್ಮ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಯ ನಂತರ ಅನಯಾ ಬಂಗಾರ್ ಆಗಿದ್ದಾರೆ,
ಸಾಮಾಜಿಕ ಮಾಧ್ಯಮದಲ್ಲಿ ಶುಭ ಸುದ್ದಿಯನ್ನು ಹಂಚಿಕೊಂಡ ಅನಯಾ ತಮ್ಮ ತಂದೆ, ವೈದ್ಯರು ಮತ್ತು ಆಸ್ಪತ್ರೆ ತಂಡಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ, ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿರುವುದಾಗಿ ಅನಯಾ ಸ್ವತಃ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ಪರಿವರ್ತನೆಯ ಕಥೆಯನ್ನು ಹಂಚಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ತನ್ನ ಮತ್ತು ತನ್ನ ತಂದೆಯ ಚಿತ್ರವನ್ನು ಅನಯಾ ಹಂಚಿಕೊಂಡಿದ್ದಾರೆ. ಆ ಕ್ಷಣ ತನಗೆ ತುಂಬಾ ಅರ್ಥಪೂರ್ಣವಾಗಿದೆ ಎಂದು ಅವರು ವಿವರಿಸಿದ್ದಾರೆ. ಈ ಪ್ರಯಾಣವು ತನಗೆ ಮಾತ್ರವಲ್ಲದೆ ತನ್ನ ಕುಟುಂಬಕ್ಕೂ ಸುಲಭವಾಗಿರಲಿಲ್ಲ ಮತ್ತು ಪ್ರತಿಯೊಬ್ಬರೂ ಸ್ವೀಕಾರ ಮತ್ತು ತಿಳುವಳಿಕೆಯಲ್ಲಿ ಬೆಳೆಯಲು ಹೇಗೆ ಸಮಯ ತೆಗೆದುಕೊಂಡಿತು ಎಂಬುದರ ಕುರಿತು ಅವರು ಮಾತನಾಡಿದರು.

“ಈ ಪ್ರಯಾಣ ಸುಲಭವಾಗಿರಲಿಲ್ಲ. ನನಗೆ ಮಾತ್ರವಲ್ಲ, ನನ್ನ ಕುಟುಂಬಕ್ಕೂ ಸಹ. ಅವರು ನನ್ನನ್ನು ಅರ್ಥಮಾಡಿಕೊಳ್ಳಲು, ಸ್ವೀಕರಿಸಲು ಮತ್ತು ನನ್ನೊಂದಿಗೆ ಇರಲು ಬಹಳ ಸಮಯ ತೆಗೆದುಕೊಂಡರು. ಗೊಂದಲ ಮತ್ತು ಪ್ರಶ್ನೆಗಳ ಹಲವು ಕ್ಷಣಗಳು ಇದ್ದವು. ಆದರೆ ಇಂದು, ನಾನು ಇಲ್ಲಿರುವುದು ತುಂಬಾ ಸಂತೋಷವಾಗಿದೆ” ಎಂದು ಅನಯಾ ಬಂಗಾರ್ ಅವರು ಹಂಚಿಕೊಂಡ ಪೋಸ್ಟ್ನಲ್ಲಿ ಹೇಳಿದ್ದಾರೆ.

“ನನ್ನ ಜೀವನದ ಅತ್ಯಂತ ಪ್ರಮುಖ ಕ್ಷಣಗಳಲ್ಲಿ ನನ್ನ ತಂದೆ ನನ್ನ ಜೊತೆಗಿದ್ದರು ಎಂದು ಹೇಳಲು ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಶಸ್ತ್ರಚಿಕಿತ್ಸೆ ನನಗೆ ಒಂದು ದೊಡ್ಡ ಹೆಜ್ಜೆಯಾಗಿತ್ತು. ಬದಲಾವಣೆಗೆ ಸಮಯ ಬೇಕು. ಪ್ರೀತಿಗೆ ಸಮಯ ಬೇಕು. ಎಲ್ಲರಿಗೂ ಧನ್ಯವಾದಗಳು. ಯಾವಾಗಲೂ,” ಎಂದು ಅನಯಾ ಹೇಳಿದರು.

ವ್ಯಜಿನೋಪಾಸ್ಟಿ ಸರ್ಜರಿ ವ್ಯಕ್ತಿಯ ಜನನಾಂಗವನ್ನು ಸ್ತ್ರಿಲಿಂಗಕ್ಕೆ ಅನುಗುಣವಾಗಿ ಪುನರ್ ನಿರ್ಮಾಣ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಮಾಡುವ ಸರ್ಜರಿಯಾಗಿದೆ. ಇದರ ಬೆನ್ನಲ್ಲಿಯೇ ಅವರು ಏಕಕಾಲದಲ್ಲಿ ತಂದೆ ಹಾಗೂ ತಾಯಿ ಎರಡೂ ಆದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಳ್ಳುವ ಸಾಧ್ಯತೆಯೂ ಇದೆ. ಅದಕ್ಕೆ ಕಾರಣ ಅವರು ಹೇಳಿರುವ ಮಾತು. ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲೇ ತಮ್ಮ ವೀರ್ಯವನ್ನು ಶೇಖರಿಸಿಟ್ಟಿರುವುದಾಗಿ ಅನಯಾ ಬಹಿರಂಗಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಯಿಯಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ

ಪರಿವರ್ತನೆಗೆ ಮುನ್ನ ಅನಯಾ ಅವರನ್ನು ಆರ್ಯನ್ ಎಂದು ಗುರುತಿಸಲಾಗಿತ್ತು ಮತ್ತು ಕ್ರಿಕೆಟ್ ಪ್ರವೇಶಿಸುವಲ್ಲಿ ಸಂಜಯ್ ಬಂಗಾರ್ ಅವರ ಹೆಜ್ಜೆಗಳನ್ನು ಅನುಸರಿಸಿದ್ದರು. ಆರ್ಯನ್ ಮುಂಬೈ ಅಂಡರ್-16 ಮತ್ತು ಪಾಂಡಿಚೇರಿ ಅಂಡರ್-19 ಟ್ರಯಲ್ಸ್ ಪರ ಆಡಿದ್ದರು ಮತ್ತು ಮುಂಬೈ ಅಂಡರ್-23ಸ್ ತಂಡಕ್ಕಾಗಿ ಟ್ರಯಲ್ಸ್ ನಲ್ಲಿಯೂ ಕಾಣಿಸಿಕೊಂಡಿದ್ದರು.



