ಜೈಪುರ : ರಾಜಸ್ಥಾನದ ಜೈಪುರದಲ್ಲಿ ನಡೆದ ಕಾರು ಅಪಘಾತದಲ್ಲಿ ಖ್ಯಾತ ನಟಿ ಮತ್ತು ರೂಪದರ್ಶಿ ಹರ್ಷಿಲ್ ಕಾಲಿಯಾ (30) ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ಜೈಪುರದ ಶಿಪ್ರಾ ಪಾತ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ರಾತ್ರಿ 11:30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಕಾಲಿಯಾ ಅವರ ವಾಹನವು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಎಡಕ್ಕೆ ಉರುಳುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ನಂತರ, ಸ್ಥಳೀಯ ನಿವಾಸಿಗಳು ವಾಹನವನ್ನು ಮೇಲಕ್ಕೆತ್ತಿ, ಹರ್ಷಿಲ್ ಅವರನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಲೆಗೆ ಗಂಭೀರ ಗಾಯಗಳಾಗಿದ್ದ ಹರ್ಷಿಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಅಪಘಾತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಹರ್ಷಿಲ್ ಅವರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಹರ್ಷಿಲ್ ಕಾಲಿಯಾ ನಟನೆ ಮತ್ತು ಮಾಡೆಲಿಂಗ್ನಲ್ಲಿ ಸಕ್ರಿಯರಾಗಿದ್ದರು. ಅವರು ‘ಕ್ರೈಮ್ ನೆಕ್ಸ್ಟ್ ಡೋರ್’ ವೆಬ್ ಸರಣಿ ಮತ್ತು ಹಲವಾರು ರಾಜಸ್ಥಾನಿ ಹಾಡುಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಪತ್ರಕರ್ತೆಯೊಬ್ಬರ ಮಗಳೂ ಆಗಿರುವ ಹರ್ಷಿಲ್ ಇತ್ತೀಚೆಗೆ ತಮ್ಮ ಮಾಡೆಲಿಂಗ್ ವೃತ್ತಿಜೀವನದತ್ತ ಹೆಚ್ಚು ಗಮನಹರಿಸಿದ್ದರು.


