ಅಲಹಾಬಾದ್: ವೈಯಕ್ತಿಕ ಸ್ವಾತಂತ್ರ್ಯ ಮತ್ತು ಲಿವ್-ಇನ್ ಸಂಬಂಧಗಳ ಕುರಿತಾದ ಚರ್ಚೆಯಲ್ಲಿ ಅಲಹಾಬಾದ್ ಹೈಕೋರ್ಟ್ ಶನಿವಾರ ಒಂದು ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ವಿವಾಹಿತ ಪುರುಷನೊಬ್ಬ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನೇತ್ರಪಾಲ್ ಎಂಬ ವಿವಾಹಿತ ವ್ಯಕ್ತಿ ಅನಾಮಿಕಾ ಎಂಬ 18 ವರ್ಷ ಮೇಲ್ಪಟ್ಟ ಯುವತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಇದನ್ನು ವಿರೋಧಿಸಿದ ಅನಾಮಿಕಾ ಅವರ ತಾಯಿ, ನೇತ್ರಪಾಲ್ ಈಗಾಗಲೇ ಮದುವೆಯಾಗಿದ್ದರೂ ತನ್ನ ಮಗಳನ್ನು ಮರುಳು ಮಾಡಿ ಕರೆದೊಯ್ದಿದ್ದಾನೆ ಎಂದು ಶಹಜಹಾನ್ಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಕುಟುಂಬದಿಂದ ಜೀವ ಬೆದರಿಕೆ ಮತ್ತು ಮರ್ಯಾದಾ ಹತ್ಯೆಯ ಭೀತಿ ಎದುರಿಸುತ್ತಿದ್ದ ಈ ದಂಪತಿ, ರಕ್ಷಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು ಒಬ್ಬ ವಿವಾಹಿತ ವ್ಯಕ್ತಿ ಮತ್ತೊಬ್ಬ ಮಹಿಳೆಯೊಂದಿಗೆ ವಾಸಿಸುವುದು ಸಾಮಾಜಿಕವಾಗಿ ಅಥವಾ ನೈತಿಕವಾಗಿ ತಪ್ಪಾಗಿ ಕಾಣಿಸಬಹುದು. ಆದರೆ, ಕಾನೂನಿನ ದೃಷ್ಟಿಯಲ್ಲಿ ಇಬ್ಬರು ವಯಸ್ಕರು ಒಮ್ಮತದಿಂದ ಜೊತೆಯಾಗಿ ವಾಸಿಸುವುದು ಶಿಕ್ಷಾರ್ಹ ಅಪರಾಧವಲ್ಲ ಎಂದು ನ್ಯಾಯಾಲಯ ಹೇಳಿದೆ. ಮಹಿಳೆಗೆ 18 ವರ್ಷ ತುಂಬಿರುವುದರಿಂದ, ಆಕೆ ಯಾರ ಜೊತೆ ಇರಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಅವಳಿಗಿದೆ. ಪುರುಷ ವಿವಾಹಿತ ಎಂಬ ಕಾರಣಕ್ಕೆ ಈ ಸಂಬಂಧವನ್ನು ಕಾನೂನುಬಾಹಿರ ಎನ್ನಲಾಗದು.ಈ ಸಂಬಂಧದ ಹೆಸರಿನಲ್ಲಿ ದಂಪತಿಯನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಅಲ್ಲದೆ, ಅರ್ಜಿದಾರರ ಸುರಕ್ಷತೆಗೆ ಸ್ಥಳೀಯ ಪೊಲೀಸ್ ಮುಖ್ಯಸ್ಥರೇ ವೈಯಕ್ತಿಕ ಜವಾಬ್ದಾರರಾಗಿರಬೇಕು ಎಂದು ನಿರ್ದೇಶಿಸಿದೆ.
ಅರ್ಜಿದಾರರ ಕುಟುಂಬದವರು ಅವರಿಗೆ ಯಾವುದೇ ಹಾನಿ ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಕುಟುಂಬದ ಸದಸ್ಯರು ದಂಪತಿ ವಾಸಿಸುವ ಮನೆಗೆ ಪ್ರವೇಶಿಸುವಂತಿಲ್ಲ. ಫೋನ್ ಮೂಲಕವಾಗಲಿ ಅಥವಾ ಬೇರೆ ವ್ಯಕ್ತಿಗಳ ಮೂಲಕವಾಗಲಿ ಅವರನ್ನು ಸಂಪರ್ಕಿಸಿ ಬೆದರಿಕೆ ಹಾಕುವಂತಿಲ್ಲ ಎಂದು ನ್ಯಾಯಾಲಯ ನಿರ್ಬಂಧ ಹೇರಿದೆ.
ಈ ತೀರ್ಪು ಲಿವ್-ಇನ್ ಸಂಬಂಧಗಳ ಬಗ್ಗೆ ಇರುವ ಕಾನೂನಾತ್ಮಕ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಿದೆ. ವಿವಾಹಿತ ವ್ಯಕ್ತಿಯೊಬ್ಬ ಪರಸ್ತ್ರೀಯೊಂದಿಗೆ ಸಂಬಂಧ ಹೊಂದುವುದು ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಸಾಕ್ಷಿಯಾಗಬಹುದೇ ಹೊರತು, ಅದು ಐಪಿಸಿ (IPC) ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂಬ ಸುಪ್ರೀಂ ಕೋರ್ಟ್ನ ಹಿಂದಿನ ನಿಲುವುಗಳನ್ನು ಈ ತೀರ್ಪು ಪುನರುಚ್ಚರಿಸಿದೆ. ಆದಾಗ್ಯೂ, ನ್ಯಾಯಾಲಯವು ಕಾನೂನಿನಡಿ ಅಪರಾಧವಲ್ಲ ಎಂದ ಮಾತ್ರಕ್ಕೆ ಅದು ಸಮಾಜ ಒಪ್ಪುವಂತಹ ಸರಿಯಾದ ನಡವಳಿಕೆ ಎಂದು ಅರ್ಥವಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ.

