ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒಡೆತನ ಬದಲಾವಣೆಯಾಗಿ ಕೆಲವೇ ದಿನಗಳಾಗಿವೆ. ಆದಿತ್ಯ ಬಿರ್ಲಾ ಒಕ್ಕೂಟವು 16,706 ಕೋಟಿ ರೂಪಾಯಿಗೆ ತಂಡವನ್ನು ಖರೀದಿಸಿದ ಬೆನ್ನಲ್ಲೇ, ಉದ್ಯಮಿ ಕುಮಾರಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಕ್ರೀಡಾ ವಲಯದಲ್ಲಿ ಹೊಸ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ.
ತಂಡದ ಮಾಲೀಕತ್ವ ಬದಲಾದ ತಕ್ಷಣವೇ ಅನನ್ಯಾ ಅವರ ಜನಪ್ರಿಯತೆ ಗಗನಕ್ಕೇರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಕೇವಲ 4 ಲಕ್ಷದಿಂದ ಈಗ 22 ಲಕ್ಷಕ್ಕೆ ಜಿಗಿದಿದೆ. ಆರ್ಸಿಬಿ ಅಭಿಮಾನಿಗಳು ಈಗ ಅನನ್ಯಾ ಅವರನ್ನು ತಂಡದ ಹೊಸ ಅದೃಷ್ಟದ ದೇವತೆ ಎಂದು ಸಂಭ್ರಮಿಸುತ್ತಿದ್ದಾರೆ.

‘ಈ ಸಲ ಕಪ್ ನಮ್ದು’ ಎಂದು ವೈರಲ್
ಇತ್ತೀಚೆಗೆ ಅನನ್ಯಾ ಬಿರ್ಲಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆರ್ಸಿಬಿ ಲೋಗೋ ಜೊತೆಗೆ ‘ಈ ಸಲ ಕಪ್ ನಮ್ದು, ಲೆಟ್ಸ್ ಗೋ’ ಎಂದು ವಿಡಿಯೋ ಪೋಸ್ಟ್ ಮಾಡಿರುವುದು ಭಾರಿ ವೈರಲ್ ಆಗಿದೆ. ಈ ಪೋಸ್ಟ್ ತಂಡದ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದ್ದು, ಅನನ್ಯಾ ಅವರ ಕ್ರಿಕೆಟ್ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕೇವಲ ಉದ್ಯಮ ವಲಯಕ್ಕೆ ಸೀಮಿತವಾಗಿದ್ದ ಬಿರ್ಲಾ ಕುಟುಂಬದ ಹೆಸರು ಈಗ ಬೆಂಗಳೂರಿನ ಪ್ರತಿ ಗಲ್ಲಿಯಲ್ಲೂ ಮೊಳಗುತ್ತಿದೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿರುವ ಅವರು, “ನಿಮ್ಮ ಪ್ರೀತಿ ಮತ್ತು ಹಾರೈಕೆಗಳ ಫಲವಾಗಿ ನಾವು ಖಂಡಿತವಾಗಿಯೂ ಈ ಬಾರಿ ಸಾಧನೆ ಮಾಡುತ್ತೇವೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



