ಬೆಂಗಳೂರು : ಬಹುಭಾಷಾ ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಾರ್ಚ್ 30, ಸೋಮವಾರ ಬೆಳಗ್ಗೆ ಪ್ರಕಾಶ್ ರಾಜ್ ಅವರ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.ಇಂದು ಸಂಜೆ ಅಂತ್ಯಕ್ರಿಯೆಯ ಕಾರ್ಯಕ್ರಮಗಳು ನಡೆಯಲಿದ್ದು ಅಂತಿಮ ದರ್ಶನಕ್ಕೆ ಅವರ ಕುಟುಂಬಸ್ಥರು,ಆಪ್ತರು ಆಗಮಿಸುತ್ತಿದ್ದಾರೆ.

ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದ ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.
ಪ್ರಕಾಶ್ ರಾಜ್ ಅವರ ತಂದೆ ಹಿಂದೂ ಧರ್ಮೀಯರಾಗಿದ್ದರೆ, ತಾಯಿ ಸ್ವರ್ಣಲತಾ ಅವರು ರೋಮನ್ ಕ್ಯಾಥೋಲಿಕ್ ಧರ್ಮೀಯರಾಗಿದ್ದರು.
ಸ್ವರ್ಣಲತಾ ಅವರು ಗದಗಿನವರಾಗಿದ್ದು, ಬಾಲ್ಯದಲ್ಲಿಯೇ ಅನಾಥರಾಗಿ ಬೆಳಗಾವಿಯ ಅನಾಥಾಶ್ರಮದಲ್ಲಿ ನರ್ಸಿಂಗ್ ತರಬೇತಿ ಪಡೆದು ಬೆಂಗಳೂರಿಗೆ ಬಂದು ನೆಲೆಸಿದ್ದರು. ತಮ್ಮ ಜೀವನದಲ್ಲಿ ಅಪಾರ ತ್ಯಾಗ ಮಾಡಿದ ತಾಯಿಯನ್ನು ಪ್ರಕಾಶ್ ರಾಜ್ ಅವರು ದೇವತೆಯಂತೆ ನೋಡುತ್ತಿದ್ದರು. ತಾಯಿಯ ತ್ಯಾಗದ ಬಗ್ಗೆ ಅವರು ಹಿಂದೆ ಮಾತನಾಡಿದ್ದು, “ಎಲ್ಲರನ್ನೂ ಓದಿಸಿದ್ದಳು ನನ್ನ ಅಮ್ಮ. ಅವಳ ತ್ಯಾಗ ಅಮೂಲ್ಯವಾದುದು” ಎಂದು ಹೇಳಿದ್ದರು.

