ಬೆಳ್ತಂಗಡಿ : ಮಂಗಳೂರು-ಬೆಳ್ತಂಗಡಿ ರಸ್ತೆಯಲ್ಲಿ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಎರಡು ವಿದ್ಯಾರ್ಥಿನಿಯರು ಫುಟ್ಬೋರ್ಡ್ನಿಂದ ಕೆಳಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಮಂಗಳೂರಿನ ಬೆಳ್ತಂಗಡಿ ತಾಲ್ಲೂಕು, ಗೇರುಕಟ್ಟೆ ಸಮೀಪದ ರೇಷ್ಮೆ ರೋಡ್ ಬಳಿ ಈ ಘಟನೆ ನಡೆದಿದೆ. ಬೆಳಗ್ಗೆ ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿದ್ದ ಸರ್ಕಾರಿ ಬಸ್,ರಸ್ತೆಯ ತಿರುವಿನಲ್ಲಿ ತಿರುಗುತ್ತಿದ್ದ ಸಂದರ್ಭದಲ್ಲಿ ಬಸ್ನ ಡೋರ್ ಏಕಾಏಕಿ ಓಪನ್ ಆಗಿದ್ದು, ಫುಟ್ಬೋರ್ಡ್ನಲ್ಲಿ ನಿಂತಿದ್ದ ಇಬ್ಬರು ವಿದ್ಯಾರ್ಥಿನಿಯರು ಕೆಳಗೆ ಬಿದ್ದಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಬಸ್ ದುರಂತದಲ್ಲಿ ಗಾಯಾಳುಗಳಾದ ಚರಿಷ್ಮಾ ಮತ್ತು ಚಸ್ಮಿಕಾ ಎಂಬ ವಿದ್ಯಾರ್ಥಿನಿಯರು ಸಹೋದರಿಯರಾಗಿದ್ದು ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ .ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಳ್ತಂಗಡಿ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಬಸ್ ಡ್ರೈವರ್ ಮತ್ತು ಕಂಡಕ್ಟರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಸ್ನ ಡೋರ್ ಓಪನ್ ಆಗಿರುವುದು ಮತ್ತು ಫುಟ್ಬೋರ್ಡ್ನಲ್ಲಿ ಪ್ರಯಾಣಿಕರನ್ನು ನಿಲ್ಲಿಸುವುದು ಈ ಅಪಘಾತಕ್ಕೆ ಮುಖ್ಯ ಕಾರಣವೆಂದು ಪೊಲೀಸರು ಹೇಳಿದ್ದಾರೆ.

