ಚಿಕ್ಕಮಗಳೂರು : ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು ಅರಿಶಿನಗುಪ್ಪಿಯಿಂದ 5 ಕಿ.ಮೀ ದೂರದ, ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ.
ಕೇರಳದ ಪಾಲಕ್ಕಾಡ್ ನಿಂದ ಏಪ್ರಿಲ್ 7 ರಂದು ಚಿಕ್ಕಮಗಳೂರಿನ ಮಾಣಿಕ್ಯಾಧಾರ ಜಲಪಾತ ವೀಕ್ಷಿಸಲು ಹೋಗುವಾಗ ಬಾಲಕಿ ಶ್ರೀ ನಂದಾ ಕಣ್ಮರೆಯಾಗಿದ್ದಳು. 41 ಜನ ಕುಟುಂಬದ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಚಿಕ್ಕಮಗಳೂರಿಗೆ ಬಂದಿದ್ದ ಶ್ರೀನಂದಾ, ನಾಪತ್ತೆಯಾಗುವ ಐದು ನಿಮಿಷದ ಮೊದಲು ತಂದೆ ಮೊಬೈಲ್ನಲ್ಲಿ ಅತ್ಯಂತ ಖುಷಿಯಿಂದ ರೀಲ್ಸ್ ಮಾಡಿದ್ದಳು.
ಸತತ ಮೂರು ದಿನಗಳ ಕಾಲ ನಡೆಸಿದ ತೀವ್ರ ಶೋಧದ ನಂತರ, ಇಂದು ಮಾಣಿಕ್ಯಧಾರಾದ ಅತ್ಯಂತ ಆಳವಾದ ಪ್ರಪಾತದ ಕೆಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಕೇರಳದಿಂದ ಆಗಮಿಸಿದ್ದ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

