ರಾಯಚೂರು : ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕರ್ನಾಟಕದ ಚಿಕ್ಕಮಗಳೂರು ಮೂಲದ ಎಂಟು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲುದೇವಕುಂಟ ಗ್ರಾಮದ ಬಳಿ ಎದುರುಗಡೆಯಿಂದ ವೇಗವಾಗಿ ಬಂದ ರೆಡಿ ಮಿಕ್ಸ್ ಟ್ಯಾಂಕರ್, ಬೊಲೆರೊ ವಾಹನಕ್ಕೆ ನೇರವಾಗಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೊಲೆರೊ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆರು ಮಂದಿ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ಸಾಗಿಸುತಿದ್ದಾಗ ದಾರಿ ಮಧ್ಯೆ ಕೊನೆಯುಸಿರೆಳೆದ್ದಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಉಳಿದ 13 ಭಕ್ತರನ್ನು ತಕ್ಷಣವೇ ಎಮ್ಮಿಗನೂರು ಮತ್ತು ಕರ್ನೂಲ್ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕರ್ನೂಲಿನ ಸ್ವೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತರೆಲ್ಲರೂ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.
ಘಟನಾ ಸ್ಥಳಕ್ಕೆ ಮಂತ್ರಾಲಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

