ಬೆಂಗಳೂರು: ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಈ ಹತ್ಯೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಪ್ರಕರಣದ 19ನೇ ಆರೋಪಿ ಚನ್ನಕೇಶವ್ ಅವರಿಗೆ ಮಾತ್ರ 7 ವರ್ಷಗಳ ಜೈಲು ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಲಾಗಿದೆ. ಒಟ್ಟು 21 ಆರೋಪಿಗಳಿದ್ದ ಪ್ರಕರಣದಲ್ಲಿ 17 ಮಂದಿಯನ್ನು ದೋಷಿ ಎಂದು ಘೋಷಿಸಲಾಗಿದ್ದು, ಇಬ್ಬರನ್ನು ಮುಕ್ತಗೊಳಿಸಲಾಗಿದೆ.
2016ರ ಜೂನ್ನಲ್ಲಿ ನಡೆದ ಕೊಲೆಗೆ ಸಂಬಂಧಿಸಿ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸುಮಾರು 10 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಅಂತಿಮ ತೀರ್ಪು ಪ್ರಕಟಿಸಿ ಅಪರಾಧಿಗಳೆಂದು ಘೋಷಿಸಿತ್ತು. ಆರೋಪಿಗಳಿಗೆ ಗಲ್ಲು ಶಿಕ್ಷೆಯ ಸಾಧ್ಯತೆಯಿದ್ದರೂ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನೇ ಅಂತಿಮಗೊಳಿಸಿದೆ. ವಿನಯ್ ಕುಲಕರ್ಣಿ ಅವರು ಪ್ರಕರಣದ ಮುಖ್ಯ ಸಂಚುಕಾರ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, 15ನೇ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್ ಬಸವರಾಜ್ ಕುರಹಟ್ಟಿ, ಸಂದೀಪ್ ಸವದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್, ಸಂತೋಷ್ ಸವದತ್ತಿ, ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಅಹ್ಮದ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ್ ಇಂಡಿ, ವಿಕಾಸ್ ಕಲಬುರಗಿ, ಪೊಲೀಸ್ ಇನ್ಸ್ಪೆಕ್ಟರ್ ಚನ್ನಕೇಶವ ಬಿ.ಟಿಂಗರಿಕರ್ ಒಟ್ಟು 17 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಪ್ರದೇಶದ ಒಂದು ಜಿಮ್ನಲ್ಲಿ ಯೋಗೇಶ್ ಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆಸ್ತಿ ವಿವಾದ ಮತ್ತು ರಾಜಕೀಯ ದ್ವೇಷವನ್ನು ಕಾರಣವಾಗಿ ತೋರಿಸಲಾಗಿತ್ತು. ಮೊದಲು ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದು, ನಂತರ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ತನಿಖೆ ವಹಿಸಿಕೊಂಡಿತು.

